ಎಲ್ಐಸಿಗೆ ಐಟಿ ಇಲಾಖೆಯಿಂದ ನೋಟಿಸ್ ಜಾರಿ!
ನವದೆಹಲಿ, ಅಕ್ಟೋಬರ್ 5: ಭಾರತೀಯ ಜೀವ ವಿಮಾ ನಿಗಮ (LIC) ಸಂಸ್ಥೆಗೆ 84 ಕೋಟಿ ರೂ ದಂಡ ವಿಧಿಸಿ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವುದು ತಿಳಿದುಬಂದಿದೆ. ಇದು ಮೂರು ಅಸೆಸ್ಮೆಂಟ್ ವರ್ಷಗಳಲ್ಲಿ ಎಲ್ಐಸಿ ಕಟ್ಟದೇ ಉಳಿದಿರುವ ತೆರಿಗೆ ಮೊತ್ತ ಎನ್ನಲಾಗಿದೆ. ಕಳೆದ ವಾರವೇ (ಸೆಪ್ಟೆಂಬರ್ 29) ಐಟಿ ನೋಟೀಸ್ ಜಾರಿಯಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಎಲ್ಐಸಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಈ ವಿಚಾರವನ್ನು ರೆಗ್ಯುಲೇಟರಿ ಫೈಲಿಂಗ್ನಲ್ಲಿ ಎಲ್ಐಸಿ ತಿಳಿಸಿದೆ.
2012-13, 2018-19 ಮತ್ತು 2019-20ರ ಅಸೆಸ್ಮೆಂಟ್ ವರ್ಷಗಳಲ್ಲಿ ಸರಿಯಾಗಿ ತೆರಿಗೆ ಪಾವತಿಸಿದೇ ಇರುವುದಕ್ಕೆ ಎಲ್ಐಸಿಗೆ ದಂಡ ವಿಧಿಸಲಾಗಿದೆ. 2012-13ರ ಅಸೆಸ್ಮೆಂಟ್ ವರ್ಷ, ಎಂದರೆ 2011-12ರ ಹಣಕಾಸು ವರ್ಷದಲ್ಲಿ 12.61 ಕೋಟಿ ರೂ ದಂಡ ಹಾಕಲಾಗಿದೆ. 2018-19ರ ಅಸೆಸ್ಮೆಂಟ್ ವರ್ಷಕ್ಕೆ 33.82 ಕೋಟಿ ರೂ ಹಾಗೂ 2019-20ರ ಹಣಕಾಸು ವರ್ಷಕ್ಕೆ 37.58 ಕೋಟಿ ರೂ ದಂಡ ವಿಧಿಸಲಾಗಿದೆ.
1961ರ ಐಟಿ ಕಾಯ್ದೆಯ 271(1)(ಸಿ) ಮತ್ತು 270ಎ ಸೆಕ್ಷನ್ಗಳ ನಿಯಮಗಳನ್ನು ಎಲ್ಐಸಿ ಉಲ್ಲಂಘಿಸಿದ್ದು, ಅದಕ್ಕೆ ದಂಡ ವಿಧಿಸಲಾಗಿದೆ ಎಂದು ಸೆಪ್ಟೆಂಬರ್ 29ರಂದು ಸಲ್ಲಿಸಿದ ನೋಟೀಸ್ನಲ್ಲಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಳೆದ ತಿಂಗಳು 290 ಕೋಟಿ ರೂ ಮೊತ್ತ ಪಾವತಿಸಲು ಜಿಎಸ್ಟಿ ನೋಟೀಸ್
ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಎಲ್ಐಸಿ ಸಂಸ್ಥೆಗೆ ಜಿಎಸ್ಟಿ ನೋಟೀಸ್ ನೀಡಲಾಗಿತ್ತು. ಒಟ್ಟು 290 ರೂ ಜಿಎಸ್ಟಿ ಕಟ್ಟಬೇಕಿದೆ ಎಂಬುದಾಗಿತ್ತು ಆ ನೋಟೀಸ್. 166.8 ಕೋಟಿ ರೂ ಜಿಎಸ್ಟಿ ಮೂಲ ಮೊತ್ತ, ಅದಕ್ಕೆ 107.1 ಕೋಟಿ ರೂ ಮೊತ್ತದ ತೆರಿಗೆ ಹಾಗೂ 16.7 ಕೋಟಿ ರೂ ಮೊತ್ತದ ದಂಡ ಒಟ್ಟು ಸೇರಿ 290 ಕೋಟಿ ರೂ ಹಣ ಕಟ್ಟಬೇಕಿದೆ ಎಂದು ತೆರಿಗೆ ಇಲಾಖೆ ಆಗ್ರಹಿಸಿತ್ತು. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ದುರ್ಬಳಕೆ ಸೇರಿದಂತೆ ಎಲ್ಐಸಿಯಿಂದ ವಿವಿಧ ನಿಯಮ ಉಲ್ಲಂಘನೆಗಳಾಗಿವೆ ಎಂಬ ಆರೋಪ ಇದೆ.
ಅದಾದ ಬೆನ್ನಲ್ಲೇ ಎಲ್ಐಸಿಯ ಷೇರುಗಳು ಹಿನ್ನಡೆ ಕಂಡಿದ್ದವು. ಸೆಪ್ಟೆಂಬರ್ 28ರಿಂದ ಅದರ ಷೇರುಬೆಲೆ ಸತತವಾಗಿ ಕುಸಿಯುತ್ತಾ ಬರುತ್ತಿದೆ. 650 ರೂ ಇದ್ದ ಅದರ ಷೇರುಬೆಲೆ ಇದೀಗ 639 ರೂಗೆ ಇಳಿದಿದೆ.
ಭಾರತದ ನಂಬರ್ ಒನ್ ವಿಮಾ ಸಂಸ್ಥೆಯಾಗಿರುವ ಎಲ್ಐಸಿ 2022ರ ಮೇ ತಿಂಗಳಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿತ್ತು. 826 ರೂ ಇದ್ದ ಷೇರಿನ ಆರಂಭಿಕ ಬೆಲೆ ಇದೀಗ 186 ರೂಗೂ ಹೆಚ್ಚು ಮೊತ್ತದಷ್ಟು ಕುಸಿತ ಕಂಡಿದೆ.
ಸ್ವಿಗ್ಗಿ ಸಾಲದ ನೆರವು; 8,000 ಹೋಟೆಲ್ಗಳಿಗೆ 450 ಕೋಟಿ ರೂ ಸಾಲ ವಿತರಣೆ
ನವದೆಹಲಿ, ಅಕ್ಟೋಬರ್ 5: ಆನ್ಲೈನ್ ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ ಆದ ಸ್ವಿಗ್ಗಿ (swiggy) ತನ್ನ ರೆಸ್ಟೋರೆಂಟ್ ಪಾರ್ಟ್ನರ್ಗಳನ್ನು ಬಲಪಡಿಸುವ ಉದ್ದೇಶದಿಂದ ಸಾಲದ ನೀಡತ್ತಿದೆ. ಅದರ ಕ್ಯಾಪಿಟಲ್ ಅಸಿಸ್ಟ್ ಯೋಜನೆ (capital assist program) ಅಡಿಯಲ್ಲಿ ಈವರೆಗೆ 8,000 ಹೋಟೆಲ್ ಮಾಲೀಕರಿಗೆ 450 ಕೋಟಿ ರೂ ಮೊತ್ತದಷ್ಟು ಸಾಲ ವಿತರಣೆ ಆಗಿರುವುದು ತಿಳಿದುಬಂದಿದೆ. 2017ರಲ್ಲಿ ಸ್ವಿಗ್ಗಿಯಿಂದ ಕ್ಯಾಪಿಟಲ್ ಅಸಿಸ್ಟ್ ಯೋಜನೆ ಆರಂಭವಾಗಿದ್ದು, ಕಳೆದ ವರ್ಷ (2022ರಲ್ಲಿ) ಸಾಕಷ್ಟು ಹೋಟೆಲ್ಗಳು ಈ ಸಾಲ ಸೌಲಭ್ಯ ಪಡೆದಿದ್ದವು. ಆರು ವರ್ಷದಲ್ಲಿ ಸ್ವಿಗ್ಗಿಯಿಂದ ಸಾಲ ಪಡೆದ 8,000 ಹೋಟೆಲ್ ಮಾಲೀಕರ ಪೈಕಿ 3,000 ಮಂದಿ 2022ರಲ್ಲಿ ಸಾಲ ಪಡೆದಿದ್ದಾರೆ.
ಕ್ಯಾಪಿಟಲ್ ಅಸಿಸ್ಟ್ ಪ್ರೋಗ್ರಾಂ ಅಡಿಯಲ್ಲಿ ಅವಧಿ ಸಾಲ, ಕ್ರೆಡಿಟ್ ಲೈನ್ ಇತ್ಯಾದಿ ರೀತಿಯ ಧನಸಹಾಯವನ್ನು ಸ್ವಿಗ್ಗಿ ಒದಗಿಸುತ್ತದೆ. ಇದಕ್ಕಾಗಿ ಇಂಡಿಫಿ, ಇನ್ಕ್ರೆಡ್, ಎಫ್ಟಿ ಕ್ಯಾಶ್, ಪೇಯು ಫೈನಾನ್ಸ್, ಐಐಎಫ್ಎಲ್ ಮೊದಲಾದ ಹಣಕಾಸು ಸಂಸ್ಥೆಗಳ ಜೊತೆ ಸ್ವಿಗ್ಗಿ ಒಪ್ಪಂದ ಮಾಡಿಕೊಂಡಿದೆ.
ಸ್ವಿಗ್ಗಿಯ ಮುಖ್ಯ ವ್ಯವಹಾರವು ರೆಸ್ಟೋರೆಂಟ್ಗಳಿಂದ ಆಹಾರವನ್ನು ಗ್ರಾಹಕರಿಗೆ ತಲುಪಿಸುವುದು. ಹೀಗಾಗಿ ರೆಸ್ಟೋರೆಂಟ್ಗಳು ಆರೋಗ್ಯದಿಂದಿರುವುದು ಸ್ವಿಗ್ಗಿಗೆ ಮುಖ್ಯ. ರೆಸ್ಟೋರೆಂಟ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಬಂದ್ ಮಾಡಿದರೆ ಅದರ ಪರಿಣಾಮ ಸ್ವಿಗ್ಗಿ ಮೇಲೂ ಆಗುತ್ತದೆ. ಈ ಕಾರಣಕ್ಕೆ ಸ್ವಿಗ್ಗಿ 2017ರಲ್ಲಿ ಕ್ಯಾಪಿಟಲ್ ಅಸಿಸ್ಟ್ ಪ್ರೋಗ್ರಾಂ ಆರಂಭಿಸಿ, ರೆಸ್ಟೋರೆಂಟ್ಗಳಿಗೆ ಸಾಲ ಸೌಲಭ್ಯ ಒದಗಿಸಿ ಆರ್ಥಿಕವಾಗಿ ಬಲ ತುಂಬುವ ಕೆಲಸ ಮಾಡುತ್ತಿದೆ.
‘ಎನ್ಬಿಎಫ್ಸಿಗಳು ನಮ್ಮ ಪಾರ್ಟ್ನರುಗಳಿಗೆ (ಹೋಟೆಲ್) ಪ್ರೀ ಅಪ್ರೂವ್ಡ್ ಲೋನ್ಗಳನ್ನು ತ್ವರಿತವಾಗಿ ವಿತರಿಸುತ್ತವೆ. ಇದರಿಂದ ಹೋಟೆಲ್ಗಳ ವ್ಯವಹಾರ ಬಲಪಡಿಸುತ್ತಿವೆ,’ ಎಂದು ಸ್ವಿಗ್ಗಿ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಸ್ವಪ್ನಿಲ್ ಬಾಜಪೇಯ್ ಹೇಳುತ್ತಾರೆ.
ನಾವು ಮೂರು ಸುತ್ತುಗಳ ಫೈನಾನ್ಸಿಂಗ್ ಪಡೆದಿದ್ದೇವೆ. ಅರ್ಜಿ ಸಲ್ಲಿಸುವುದರಿಂದ ಹಿಡಿದು, ಸಾಲ ಪಡೆಯುವವರೆಗೆ ಇಡೀ ಪ್ರಕ್ರಿಯೆ ಬಹಳ ವೇಗ ಹಾಗು ಪಾರದರ್ಶಕವಾಗಿದೆ ಎಂದು ಬೆಂಗಳೂರಿನ ಹೋಟೆಲ್ವೊಂದರ ಮಾಲಕರಾದ ಆರತಿ ಮತ್ತು ಸುಮಿತ್ ರಸ್ತೋಗಿ ಹೇಳಿದ್ದಾರೆ.