ಲಂಕಾ 326ಕ್ಕೆ ಆಲೌಟ್: ದಕ್ಷಿಣ ಆಫ್ರಿಕಾಕ್ಕೆ 102 ರನ್‌ಗಳ ಭರ್ಜರಿ ಜಯ
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ಭಾರೀ ಮೊತ್ತ ಪೇರಿಸಿದ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ 102 ರನ್ ಜಯ ಸಾಧಿಸಿತು.
ಶ್ರೀಲಂಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಮೂವರು ಅತ್ಯಮೋಘ ಶತಕ ಸಿಡಿಸಿ 428 ರನ್ ಗಳ ಮೊತ್ತ ಕಲೆ ಹಾಕಲು ಕಾರಣವಾದರು. ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್, ವನ್ ಡೌನ್ ಆಟಗಾರ ವ್ಯಾನ್ ಡರ್ ಡ್ಯೂಸನ್ ಮತ್ತು ಏಡನ್ ಮಾರ್ಕ್ರಮ್ ಶತಕಗಳನ್ನು ಬಾರಿಸಿದರು.
ಭಾರೀ ಮೊತ್ತದ ಗುರಿ ಬೆನ್ನಟ್ಟಿದ ಲಂಕಾ ಅಷ್ಟೇನೂ ಹಗುರವಾಗಿ ಪರಿಗಣಿಸದಂತೆ ಪ್ರದರ್ಶನ ತೋರಿ ಮುನ್ನೂರರ ಗಡಿ ದಾಟಿತು. 44.5 ಓವರ್ ಗಳಲ್ಲಿ 326 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದು ಕೊಂಡಿತು. ಕುಸಾಲ್ ಮೆಂಡಿಸ್ 76, ಚರಿತ್ ಅಸಲಂಕಾ 79, ನಾಯಕ ದಸುನ್ ಶಣಕ 68 ರನ್ ಗಳಿಸಿ ಔಟಾದರು.ಸದೀರ ಸಮರವಿಕ್ರಮ 23, ಕಸುನ್ ರಜಿತಾ 33 ರನ್ ಗಳಿಸಿ ಔಟಾದರು
ಜೆರಾಲ್ಡ್ ಕೋಟ್ಜಿ 3,ಮಾರ್ಕೊ ಜಾನ್ಸೆನ್, ರಬಾಡ ಮತ್ತು ಕೇಶವ್ ಮಹಾರಾಜ್ ತಲಾ 2 ವಿಕೆಟ್ ಪಡೆದರು. ಸ್ಪೋಟಕ ಶತಕ ಸಿಡಿಸಿದ ಮಾರ್ಕ್ರಾಮ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.