ಶ್ರೀಲಂಕಾ ವಿರುದ್ಧ ಕಿವೀಸ್‌ಗೆ 5 ವಿಕೆಟ್‌ಗಳ ಜಯ; ಪಾಕಿಸ್ತಾನ ದ ಸೆಮೀಸ್ ದಾರಿ ಬಹುತೇಕ ಬಂದ್!
ಬೆಂಗಳೂರು: ಸಂಘಟಿತ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನದಿಂದ ನ್ಯೂಜಿಲೆಂಡ್ (New Zealand) ತಂಡವು ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ, ಸೆಮಿಫೈನಲ್ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ಆದ್ರೆ ಪಾಕಿಸ್ತಾನ (Pakistan) ತಂಡಕ್ಕೆ ಇದು ನುಂಗಲಾರದ ತುತ್ತಾಗಿದೆ. ಈ ಮೂಲಕ ಸೆಮಿಫೈನಲ್ ಸ್ಥಾನವನ್ನು ಬಹುತೇಕವಾಗಿ ಭದ್ರಪಡಿಸಿಕೊಂಡಿತು.
ಶ್ರೀಲಂಕಾ ನೀಡಿದ 171 ರನ್ ಟಾರ್ಗೆಟನ್ನು ನ್ಯೂಜಿಲೆಂಡ್ 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಗೊಂಡಿದೆ.
ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ 275+ ರನ್‌ಗಳ ಅಂತರದಿಂದ ಇಂಗ್ಲೆಂಡ್ (England) ತಂಡವನ್ನು ಸೋಲಿಸಬೇಕಿದೆ. ಅಥವಾ 2.3 ಓವರ್‌ಗಳಲ್ಲಿ ಇಂಗ್ಲೆಂಡ್ ಟಾರ್ಗೆಟ್ ಅನ್ನು ಚೇಸ್ ಮಾಡಬೇಕಿದೆ ಎಂದು ಕ್ರಿಕೆಟ್ ತಜ್ಞರು ಅಂದಾಜಿಸಿದ್ದಾರೆ. ಆದ್ರೆ ಇಂಗ್ಲೆಂಡ್ ತಂಡವನ್ನು ಅಷ್ಟು ಸುಲಭದಲ್ಲಿ ಸೋಲಿಸುವುದು ಪಾಕ್‌ಗೆ ಅಸಾಧ್ಯವಾಗಿದ್ದು, ಬಹುತೇಕ ಸೆಮಿ ಫೈನಲ್ ಕನಸು ಭಗ್ನ ಎಂದೇ ವಿಶ್ಲೇಷಿಸಲಾಗುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಕುಶಾಲ್ ಪೆರೆರಾ ಅವರ ಅರ್ಧಶತಕದ ನೆರವಿನಿಂದ 46.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 171 ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರೆ, ಲಕ್ಕಿ ಫರ್ಗ್ಯೂಸನ್, ಮಿಚೆಲ್ ಸಂತ್ನಾರ್, ರಚಿನ್ ರವೀಂದ್ರ 2, ಟಿಮ್ ಸೌಥಿ 1 ವಿಕೆಟ್ ಪಡೆದರು.
ಲಂಕಾ ನೀಡಿದ 172 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೆವೊನ್ ಕಾನ್ವೆ 45 ಮತ್ತು ರಚಿನ್ ರವೀಂದ್ರ ಅವರ 42 ರನ್ ಗಳ ನೆರವಿನಿಂದ 23.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ನಿಗದಿತ ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಈ ಮೂಲಕ ಬಹುತೇಕವಾಗಿ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿತು. ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ಎದುರಾಳಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಸೆಮಿಫೈನಲ್ ಸ್ಥಾನಕ್ಕಾಗಿ ಒಂದೊಂದು ರನ್ , ಒಂದೊಂದು ಎಸೆತ ಹಾಗೂ ವಿಕೆಟ್ ಅಷ್ಟೇ ಮುಖ್ಯವಾಗುತ್ತಿದೆ. ನ್ಯೂಜಿಲೆಂಡ್ ಸದ್ಯ ತನ್ನ 9 ಲೀಗ್ ಪಂದ್ಯದಿಂದ 5 ಗೆಲುವಿನ ಮೂಲಕ 10 ಅಂಕ ಸಂಪಾದಿಸಿದೆ. ನೆಟ್ ರನ್‌ರೇಟ್ +0.922. ಇತ್ತ ಪಾಕಿಸ್ತಾನ 8 ಪಂದ್ಯಗಳಿಂದ 4 ಗೆಲುವಿನ ಮೂಲಕ 8 ಅಂಕ ಸಂಪಾದಿಸಿದೆ. ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ದ ಗೆಲುವು ದಾಖಲಿಸಿದರೆ 10 ಅಂಕ ಆಗಲಿದೆ. ಆದರೆ ನ್ಯೂಜಿಲೆಂಡ್ ನೆಟ್ ರನ್‌ರೇಟ್ ಹಿಂದಿಕ್ಕುವುದು ಪಾಕಿಸ್ತಾನಕ್ಕೆ ಕಷ್ಟ ಸಾಧ್ಯ.
150ಕ್ಕೂ ಹೆಚ್ಚಿನ ಬಾಲ್ ಉಳಿಸಿ ನ್ಯೂಜಿಲೆಂಡ್ ಪಂದ್ಯ ಗೆದ್ದುಕೊಂಡಿದೆ. ಹೀಗಾಗಿ ಪಾಕಿಸ್ತಾನ ತನ್ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಗೆಲುವು ಸಾಧಿಸಿದರೆ ಸಾಲದು, ಸೆಮಿಫೈನಲ್ ಸ್ಥಾನ ಖಚಿತಪಡಿಸಲು ಕನಿಷ್ಠ 270ಕ್ಕೂ ಹೆಚ್ಚು ರನ್ ಗೆಲುವು ಅಥವಾ 275 ಬಾಲ್ ಬಾಕಿ ಉಳಿಸಿ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ನ್ಯೂಜಿಲೆಂಡ್ ನೆಟ್ ರನ್ ರೇಟ್ ಹಿಂದಿಕ್ಕಲು ಸಾಧ್ಯ. ಹೀಗಾಗಿ ಈ ಎರಡು ಅವಕಾಶಗಳು ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.