kerala police: ಆರೋಪಿಗಳ ಬಂಧನಕ್ಕೆ ಹೋದ ಬೆಂಗಳೂರು ಪೊಲೀಸರನ್ನು ಲಂಚ ಪಡೆದ ಆರೋಪಕ್ಕೆ ಬಂಧಿಸಿದ ಕೇರಳ ಪೊಲೀಸರು!
ಕೊಚ್ಚಿ: ವಂಚನೆ ಪ್ರಕರಣದ ಆರೋಪಿಗಳ ಬಂಧಿಸಲು ಕೇರಳಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರೇ ಲಂಚ ಪಡೆದ ಆರೋಪದ ಮೇರೆಗೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಆಂಗ್ಲ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ವಂಚನೆ ಪ್ರಕರಣದ ಆರೋಪಿಗಳಿಂದ ಲಂಚ ಪಡೆದ ಆರೋಪದಲ್ಲಿ ಇನ್‌ಸ್ಪೆಕ್ಟರ್ ಸೇರಿ 4 ಮಂದಿ ಕರ್ನಾಟಕದ ಪೊಲೀಸ್ ಅಧಿಕಾರಿಗಳನ್ನು ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ಬಳಿಕ ವಶಕ್ಕೆ ಪಡೆದವರ ಮಾಹಿತಿ ನೀಡುವುದಾಗಿ ಪೊಲೀಸರು ಹೇಳಿದ್ದು, ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಈ ಪೊಲೀಸರು ತೆರಳಿದ್ದರು ಎಂದು ಹೇಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿರುವಂತೆ, ‘ಕರ್ನಾಟಕದಲ್ಲಿ ನಡೆದ ವಂಚನೆ ಪ್ರಕರಣದ ಸಂಬಂಧ ಆರೋಪಿಯನ್ನು ಬಂಧಿಸಲು ಕರ್ನಾಟಕ ಪೊಲೀಸರು ಆಗಸ್ಟ್ 1ರಂದು ಕೊಚ್ಚಿಗೆ ತೆರಳಿದ್ದರು. ಅಲ್ಲಿ ಅವರು ಇಬ್ಬರು ಆರೋಪಿಗಳಿಂದ 3.95 ಲಕ್ಷ ರೂ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನನ್ವಯ ಕೊಚ್ಚಿಯ ಕಮಲಶ್ಶೇರಿ ಪೊಲೀಸರು ಕರ್ನಾಟಕದ 4 ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೊಚ್ಚಿ ಪೊಲೀಸ್ ಉಪ ಆಯುಕ್ತ ಬೇಬಿ ಪಿವಿ, ‘ಪ್ರಕರಣ ಸಂಬಂಧ ನಾವು ಕರ್ನಾಟಕ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರ ಗುರುತು ಹಾಗೂ ಕೊಚ್ಚಿಗೆ ಬಂದಿರುವ ಉದ್ದೇಶದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಪ್ರಕರಣ ದಾಖಲಾಗಿದೆ‘ ಎಂದು ಹೇಳಿದ್ದಾರೆ.
ಮೈಸೂರು: ವಂಚನೆ ಆರೋಪದಡಿ 10 ಆರ್ಟಿಓ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು:
ಮೈಸೂರು: ವಂಚನೆ ಆರೋಪದಡಿ 10 ಆರ್ಟಿಓ (RTO) ಅಧಿಕಾರಿಗಳು ಸೇರಿದಂತೆ 35 ಜನರ ವಿರುದ್ಧ ನಗರದ ಲಕ್ಷ್ಮಿಪುರಂ ಪೊಲೀಸ್ (Police) ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರದೀಪ್ ಕುಮಾರ್ ಎಂಬುವರು ದೂರು ನೀಡಿದ್ದಾರೆ. ಸಂಬಂಧವಿಲ್ಲದ ವ್ಯಕ್ತಿಗಳಿಂದ ಕಚೇರಿಯಲ್ಲಿ ಕೆಲಸ ನಿರ್ವಹಣೆ ಮಾಡಿಸುವುದು ಮತ್ತು ನಕಲಿ ರಸೀತಿ ಬಳಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದರು. ಇದಕ್ಕೆ ಆರ್ಟಿಓ ಅಧಿಕಾರಿಗಳು ಸಾಥ್ ನೀಡಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಪ್ರದೀಪ್ ಪೋಟೋ ವಿಡಿಯೋ ಸಮೇತ ದೂರು ದಾಖಲಿಸಿದ್ದಾರೆ. ಆರ್ಟಿಓ ಜಂಟಿ ಸಾರಿಗೆ ಆಯುಕ್ತ ಸಿ ಟಿ ಮೂರ್ತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ, ಸೂಪರಿಡೆಂಟ್ ಕುಮಾರ್ ಎಫ್ಡಿ ಚೆನ್ನವೀರಪ್ಪ ಸೇರಿ 35 ಜನರ ವಿರುದ್ಧ ದೂರು ದಾಖಲಾಗಿದೆ.