ಕಡಬ: ಕೃಷಿಗಾಗಿ ಮಾಡಿಕೊಂಡ ಸಾಲ ಮರುಪಾವತಿಸಲಾಗದೆ ಮನನೊಂದು ಕೃಷಿಕ ಆತ್ಮಹತ್ಯೆ..!
ಕಡಬ : ಕೃಷಿಗಾಗಿ ಮಾಡಿಕೊಂಡ ಸಾಲ ಮರುಪಾವತಿಸಲು ಸಾಧ್ಯವಾಗದೆ ಹತಾಶೆಗೊಂಡ ಕೃಷಿಕ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ.
ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಬುಡಲೂರು ಎಂಬಲ್ಲಿ ಈ ಘಟನೆ ನಡೆದಿದ್ದು ಬೂಡಲೂರು ನಿವಾಸಿ ಶಿವಣ್ಣ ಗೌಡ(61ವ.)ಆತ್ಮಹತ್ಯೆ ಮಾಡಿಕೊಂಡ ಕೃಷಿಕರಾಗಿದ್ದಾರೆ. ತಮ್ಮ ಮನೆಯಿಂದ ಅನತಿ ದೂರದ ಗುಡ್ಡೆಯೊಂದರಲ್ಲಿ ಶಿವಣ್ಣ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಣ್ಣ ಗೌಡ ಅವರು ಸ್ಥಳೀಯ ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಾಗಿ ರೂ.10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ.
ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರ ಹೇಮಂತ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮನೆಮಂದಿ ನಿದ್ರಿಸುತ್ತಿದ್ದಾಗ ಮನೆಗೆ ನುಗ್ಗಿ ನಗದು ಕಳವು
ಕಾರ್ಕಳ: ಮನೆಮಂದಿ ಮಲಗಿದ್ದ ವೇಳೆ ಕಳ್ಳರು ಕಿಟಕಿಯ ಬಾಗಿಲ ಚಿಲಕ ಮುರಿದು ಮನೆಯ ಒಳನುಗ್ಗಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2.25 ಲಕ್ಷ ನಗದು ದೋಚಿದ ಘಟನೆ ಕುಕ್ಕುಂದೂರು ನಲ್ಲಿ ನಡೆದಿದೆ.
ಇಲ್ಲಿನ ಜೋಡುರಸ್ತೆ ನಿವಾಸಿ ಜಗದೀಶ್ ಬಿ.ಎ. ಅವರ ಮನೆಯಲ್ಲಿ ಕಳ್ಳತನವಾಗಿದ್ದು, ರಾತ್ರಿ ಮನೆಯ ಬಾಗಿಲು ಹಾಕಿ ಭದ್ರಪಡಿಸಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ 3: 40 ಗಂಟೆಗೆ ಜಗದೀಶ್ ರವರು ಮಲಗಿದ್ದ ಕೋಣೆಯು ತೆರೆದ ಶಬ್ದ ಕೇಳಿ ಎದ್ದು ನೋಡಿದಾಗ ಮನೆಯ ಮುಂದಿನ ಬಾಗಿಲು ಅರ್ಧ ತೆರೆದಿದ್ದು, ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿರುವುದು ಕಂಡುಬಂದಿದೆ.
ಮನೆಯೊಳಗೆ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು ಮನೆಯ ಮುಖ್ಯದ್ವಾರದ ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿ ಬಾಗಿಲಿನ ಚಿಲಕವನ್ನು ಕಿಟಿಕಿಯ ಮೂಲಕ ತೆರೆದು ಮನೆಯೊಳಗೆ ಪ್ರವೇಶಿಸಿ ಮನೆಯ ಇನ್ನೊಂದು ಕೋಣೆಯೊಳಗೆ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಡಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2,25,000 ರೂ. ನಗದು ಎಗರಿಸಿದ್ದಾರೆ.ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.