ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳು ಹರಿದಾಡುತ್ತಿದ್ದು, ಸೋಮವಾರ ಚನ್ನಪಟ್ಟಣದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅವರನ್ನು ಭೇಟಿ ಮಾಡಿ, ತಮ್ಮನ್ನು ಮತ್ತು ಕ್ಷೇತ್ರವನ್ನು ಕೈಬಿಡಬಾರದು. ವಿಧಾನಸಭೆಯಲ್ಲಿ ನಮ್ಮ ಕ್ಷೇತ್ರವನ್ನು ನೀವೆ ಪ್ರತಿನಿಧಿಸಬೇಕು ಎಂದು ಒತ್ತಾಯಿಸಿದರು.
ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧಿಸುವುದು ಬೇಡ ಎಂದ ಜೆಡಿಎಸ್ ಕಾರ್ಯಕರ್ತರು ; ಕಾರಣವೇನು?
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ವರದಿಗಳ ಬೆನ್ನಲ್ಲೇ, ಪ್ರಸ್ತುತ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಅವರು ಮಂಡ್ಯದಿಂದ ಲೋಕಸಭೆ ಅಖಾಡಕ್ಕೆ ಇಳಿಯಬಾರದು ಎಂದು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕೋಲಾರ, ಹಾಸನ ಮತ್ತು ಮಂಡ್ಯ ಮೂರು ಸ್ಥಾನಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಕೋರ್ ಕಮಿಟಿ ನಾಯಕರು ಮಂಗಳವಾರ ಸಭೆ ಸೇರುವ ಸಾಧ್ಯತೆಯಿದೆ.
ಆದರೆ, ಮಂಡ್ಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಮಂಡ್ಯದ ಬಿಜೆಪಿಯ ಒಂದು ವರ್ಗ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ವರಿಷ್ಠ ಎಚ್ಡಿ ದೇವೇಗೌಡರು ಹಾಸನದಲ್ಲಿದ್ದಾರೆ, ಅವರೂ ಚನ್ನಪಟ್ಟಣದ ಪಕ್ಷದ ಮುಖಂಡರ ಬಳಿಗೆ ಹೋಗಿ ಮಾತನಾಡುತ್ತಾರೆ. ನಿರ್ಧಾರ ತೆಗೆದುಕೊಳ್ಳಲು ನಮಗೆ ಸ್ವಲ್ಪ ಸಮಯ ನೀಡಿ ಎಂದು ಕುಮಾರಸ್ವಾಮಿ ಅವರ ಪುತ್ರ ಮತ್ತು ಯುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಕುಮಾರಸ್ವಾಮಿ ಚನ್ನಪಟ್ಟಣ ಶಾಸಕರಾಗಿ ಮುಂದುವರಿಯಲಿ ಎಂದು ಪಕ್ಷದ ಕೆಲ ಕಾರ್ಯಕರ್ತರು ಒತ್ತಾಯಿಸುತ್ತಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ನಾಳೆ ಕೋರ್ ಕಮಿಟಿ ಸದಸ್ಯರ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿದ ನಂತರ ಮುಂದಿನ ಕ್ರಮದ ಬಗ್ಗೆ ಪಕ್ಷದ ನಾಯಕತ್ವ ನಿರ್ಧರಿಸುತ್ತದೆ…. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧಿಸಿದರೆ ಹಳೇ ಮೈಸೂರು ಭಾಗದಲ್ಲಿ ಪ್ರಭಾವ ಬೀರುತ್ತಾರೆ ಎಂಬ ಭಾವನೆ ಸಹಜವಾಗಿದೆ. ಬಿಜೆಪಿ ಕಾರ್ಯಕರ್ತರಲ್ಲಿಯೂ ಇದೇ ಭಾವನೆ ಇದೆ. ನಾಳೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷದ ಹಿರಿಯ ನಾಯಕ, ಮಾಜಿ ಸಂಸದ ಸಿಎಸ್ ಪುಟ್ಟರಾಜು ಅವರ ಹೆಸರುಗಳೂ ಕೇಳಿಬರುತ್ತಿವೆ.