ಅಂತ್ಯಗೊಂಡ ಭಾರತದ ಸ್ಟಾರ್ ಓಪನರ್ ಶಿಖರ್ ಧವನ್ - ಆಯೇಷಾ ದಾಂಪತ್ಯ ಜೀವನ..!
ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ (Shikhar Dhawan), ತಮ್ಮ ಪತ್ನಿ ಆಯೇಷಾ ಮುಖರ್ಜಿ (Aesha Mukerji ) ಅವರಿಂದ ವಿಚ್ಛೇದನ ಪಡೆದಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯ ಶಿಖರ್ ಧವನ್, ಪತ್ನಿ ಆಯೇಷಾ ಮುಖರ್ಜಿ ಅವರಿಂದ ವರ್ಷಗಟ್ಟಲೆ ಮಾನಸಿಕ ಹಿಂಸೆ ಅನುಭವಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟು ವಿಚ್ಛೇದನ (Divorce) ಮಂಜೂರು ಮಾಡಿದೆ.
ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಒಪ್ಪಿಕೊಂಡಿದ್ದು, ತಮ್ಮ ಆದೇಶದಲ್ಲಿ, ಧವನ್ ಅವರ ಪತ್ನಿ ತಮ್ಮ ಮೇಲಿನ ಆರೋಪಗಳನ್ನು ವಿರೋಧಿಸಲ್ಲೂ ಇಲ್ಲ ಅಥವಾ ಸ್ವತಃ ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಮಗನ ಖಾಯಂ ಕಸ್ಟಡಿ ಬಗ್ಗೆ ಆದೇಶವಿಲ್ಲ
2012 ರಲ್ಲಿ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆಯೇಷಾ ಅವರಿಗೆ ಇದು ಎರಡನೇ ಮದುವೆ ಆಗಿತ್ತು. ಈ ಇಬ್ಬರು ದಂಪತಿಗಳಿಗೆ ಓರ್ವ ಮಗನಿದ್ದು, ಮಗನ ಖಾಯಂ ಕಸ್ಟಡಿಯ ಕುರಿತು ಯಾವುದೇ ಆದೇಶವನ್ನು ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಲಯವು ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನ ಮಗನನ್ನು ಭೇಟಿಯಾಗುವ ಹಕ್ಕನ್ನು ನೀಡಿದ್ದು, ಮಗನೊಂದಿಗೆ ವೀಡಿಯೊ ಕರೆ ಮೂಲಕ ಮಾತುಕತೆ ನಡೆಸುವುದಕ್ಕೂ ಅನುಮತಿ ನೀಡಿದೆ.
ಭಾರತಕ್ಕೆ ಕರೆತರಬೇಕು
ಇದಲ್ಲದೆ ಮಗನ ಶಾಲಾ ರಜೆಯ ಅವಧಿಯ ಕನಿಷ್ಠ ಅರ್ಧದಷ್ಟು ರಜೆಯನ್ನು ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಕಳೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಧವನ್ ಕುಟುಂಬದೊಂದಿಗೆ ರಾತ್ರಿಯ ತಂಗುವಿಕೆ ಸೇರಿದಂತೆ ಭೇಟಿ ಉದ್ದೇಶಗಳಿಗಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ಧವನ್ ಅವರ ಪತ್ನಿ ಆಯೇಷಾ ಅವರಿಗೆ ನ್ಯಾಯಾಲಯ ಆದೇಶಿಸಿದೆ.
ಶಿಖರ್ ಧವನ್ ಅವರ ಕ್ರಿಕೆಟ್ ಜೀವನ
ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗಿರುವ ಧವನ್ ತಂಡದ ಪರ ಟಿ20 ಮಾದರಿಯಲ್ಲಿ ಒಟ್ಟು 68 ಪಂದ್ಯಗಳನ್ನಾಡಿದ್ದು, ಇದರಲ್ಲಿ 11 ಅರ್ಧಶತಕಗಳ ಸಹಿತ 1759 ರನ್ ಬಾರಿಸಿದ್ದಾರೆ. ಏಕದಿನ ಮಾದರಿಯಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿದ್ದ ಧವನ್, ಈ ಮಾದರಿಯಲ್ಲಿ 167 ಪಂದ್ಯಗಳನ್ನಾಡಿದ್ದು, 44.11 ಸರಾಸರಿಯಲ್ಲಿ 17 ಶತಕ ಮತ್ತು 39 ಅರ್ಧ ಶತಕಗಳ ಸಹಿತ 6793 ರನ್ ಕಲೆಹಾಕಿದ್ದಾರೆ. ಹಾಗೆಯೇ ಟೆಸ್ಟ್ ಮಾದರಿಯಲ್ಲೂ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಧವನ್, 34 ಪಂದ್ಯಗಳಲ್ಲಿ 23165 ರನ್ ಸಿಡಿಸಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಧವನ್ 217 ಪಂದ್ಯಗಳಿಂದ ಎರಡು ಶತಕ ಮತ್ತು 50 ಅರ್ಧ ಶತಕಗಳ ನೆರವಿನಿಂದ 6616 ರನ್ ಕಲೆಹಾಕಿದ್ದಾರೆ.