ತರಗತಿಯಲ್ಲೇ ಮಕ್ಕಳಿಂದ ವಿದ್ಯಾರ್ಥಿ ಕೆನ್ನೆಗೆ ಹೊಡೆಸಿದ ಶಿಕ್ಷಕಿ

ಲಕ್ನೋ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳಿಗೆ ಹೇಳುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ. ಶಿಕ್ಷಕಿ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋ ವೈರಲ್ ಆಗಿದೆ. ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹುಡುಗ ಮುಸ್ಲಿಂ ಸಮುದಾಯದವನು. ಶಿಕ್ಷಕಿ ಕ್ರಮವು ಕೋಮುವಾದಿ ಸ್ವರೂಪದ್ದಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೋದಲ್ಲಿ ಶಿಕ್ಷಕಿ ಕೋಮುವಾದಿ ಪದಗಳನ್ನು ಬಳಸಿದ್ದು, ಪೊಲೀಸರೂ ಇದನ್ನು ಖಚಿತಪಡಿಸಿದ್ದಾರೆ.
ಗಣಿತ ಕೋಷ್ಟಕಗಳನ್ನು ಕಲಿಯದ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಮಹಿಳಾ ಶಿಕ್ಷಕಿ ಹೊಡೆಸಿರುವ ದೃಶ್ಯದ ವೀಡಿಯೋ ಗಮನಿಸಿದ್ದೇವೆ. ವೀಡಿಯೋದಲ್ಲಿನ ಆಕ್ಷೇಪಾರ್ಹ ಕಾಮೆಂಟ್ ಬಗ್ಗೆ ನಾವು ಶಾಲೆಯ ಪ್ರಾಂಶುಪಾಲರೊಂದಿಗೆ ಮಾತನಾಡಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್ ಹೇಳಿದ್ದಾರೆ.
ಮುಸ್ಲಿಂ ಮಹಿಳೆಯರೇ ತಮ್ಮ ಮಕ್ಕಳ ಶೈಕ್ಷಣಿಕ ಕುಸಿತಕ್ಕೆ ಕಾರಣ ಎಂದು ವೀಡಿಯೋದಲ್ಲಿ ಶಿಕ್ಷಕಿ ಹೇಳಿಕೆ ನೀಡಿದ್ದಾರೆ. ನಾವು ಮೂಲ ಶಿಕ್ಷಣ ಅಧಿಕಾರಿಗೆ ತಿಳಿಸಿದ್ದೇವೆ. ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಹಕ್ಕುಗಳ ಸಂಸ್ಥೆಯು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆದೇಶಿಸಿದೆ. ಶಾಲೆಯ ಅಧಿಕಾರಿಗಳೊಂದಿಗೆ ರಾಜಿ ಮಾಡಿಕೊಂಡಿರುವುದರಿಂದ ಶಾಲೆಯ ವಿರುದ್ಧ ಆರೋಪ ಹೊರಿಸುವುದಿಲ್ಲ. ನನ್ನ ಮಗನನ್ನು ಈ ಶಾಲೆಗೆ ಕಳುಹಿಸುವುದಿಲ್ಲ. ಶಾಲೆ ನಮ್ಮ ಶುಲ್ಕವನ್ನು ಹಿಂದಿರುಗಿಸಿದೆ. ಈ ವಿಷಯವನ್ನು ಮುಂದುವರಿಸುವುದು ಬಯಸುವುದಿಲ್ಲ ಎಂದು ಬಾಲಕನ ತಂದೆ ತಿಳಿಸಿದ್ದಾರೆ.