ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಯುವರಾಜ್ ಸಿಂಗ್
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಕ್ರಿಕೆಟರ್, ಸಿಕ್ಸರ್ಸ್ ಕಿಂಗ್ ಯುವರಾಜ್ ಸಿಂಗ್ ಸ್ಪರ್ಧಿಸಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ಗಾಳಿಸುದ್ದಿ ಠುಸ್ಸಾಗಿದೆ. ‘ತಾವು ರಾಜಕೀಯಕ್ಕೆ ಬರುವುದಿಲ್ಲ’ ಎಂದು ಸ್ವತಃ ಯುವರಾಜ್ ಸ್ಪಷ್ಟನೆ ನೀಡಿದ್ದಾರೆ.
ಭಾರತದ ಮಾಜಿ ಆಲ್‌ರೌಂಡರ್ ಯುವಿ ಅವರು, ಚುನಾವಣಾ ಅಖಾಡಕ್ಕೆ ಪ್ರವೇಶಿಸಬಹುದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ವರದಿಗಳು ಹರದಾಡುತ್ತಿದ್ದವು. ಆದರೆ, ಇದೆಲ್ಲವನ್ನೂ ಅವರು ಶುಕ್ರವಾರ ತಳ್ಳಿಹಾಕಿದ್ದಾರೆ.
Contrary to media reports, I'm not contesting elections from Gurdaspur. My passion lies in supporting and helping people in various capacities, and I will continue to do so through my foundation @YOUWECAN. Let's continue making a difference together to the best of our abilities❤️
— Yuvraj Singh (@YUVSTRONG12) March 1, 2024
“ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ನಾನು ಗುರುದಾಸ್‌ಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಾನು ನಡೆಸುತ್ತಿರುವ @YOUWECAN ಫೌಂಡೇಶನ್ನಿಂದ ಜನ ಸೇವೆಯನ್ನು ಮುಂದುವರಿಸುತ್ತೇನೆ. ಇದಕ್ಕಾಗಿ ನಾನು ರಾಜಕೀಯಕ್ಕೆ ಬರುವ ಅಗತ್ಯವಿಲ್ಲ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ನಮಗಿರುವ ಸಾಮರ್ಥ್ಯ ಆಧಾರದ ಮೇಲೆ ಅತ್ಯುತ್ತಮವಾದ ಬದಲಾವಣೆಯನ್ನು ನಾವು ಒಟ್ಟಿಗೆ ಮುಂದುವರಿಸೋಣ. ಲೋಕಸಭೆ ಚುನಾವಣೆಯಲ್ಲಿ ತಾವು ಯಾವ ಪಕ್ಷದಿಂದಲೂ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಾಲಿವುಡ್ ನಟ ಸನ್ನಿ ಡಿಯೋಲ್ ಗುರುದಾಸ್‌ಪುರ ಕ್ಷೇತ್ರದ ಬಿಜೆಪಿ ಸಂಸದರಾಗಿ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಬದಲಾವಣೆ ಬಯಸಿರುವ ಕಮಲ ಪಕ್ಷ ಕ್ರಿಕೆಟರ್ ಯುವರಾಜ್ ಸಿಂಗ್ರನ್ನು ಕಣಕ್ಕಿಳಿಸುವ ಬಗ್ಗೆ ಪ್ರಯತ್ನ ನಡೆಸಿತ್ತು. ತಿಂಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಯುವರಾಜ್ ಸಿಂಗ್ ಭೇಟಿಯಾದ ನಂತರ ಸ್ಪರ್ಧೆಯ ಬಗ್ಗೆ ಮಾತುಗಳು ಶುರುವಾಗಿದ್ದವು.
ಸಂಸತ್ತಿನ ಕಲಾಪಗಳಿಗೆ ಸನ್ನಿ ಡಿಯೋಲ್ ಗೈರಾಗುತ್ತಿರುವುದನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಟೀಕಿಸಿದ್ದರು. ರಾಜಕೀಯ ಎಂದರೆ ಜನರ ಸೇವೆ ಮಾಡುವುದು ಮತ್ತು ಹಗಲಿರುಳು ಅವರಿಗೆ ಲಭ್ಯವಿರುವುದು ಎಂದು ತಿವಿದಿದ್ದರು.
ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಗುರುವಾರ (ಫೆ.29) ನಡೆದಿತ್ತು. ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಕುರಿತು ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಗುರುದಾಸ್‌ಪುರದಿಂದ ಯುವರಾಜ್ ಸಿಂಗ್ ಅಥವಾ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರನ್ನು ಕಣಕ್ಕಿಳಿಸಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸವಾಲಾಗಿರುವ ಕ್ಷೇತ್ರಗಳಿಗೆ ಮೊದಲು ಟಿಕೆಟ್ ಘೋಷಣೆ ಮಾಡುವುದು, ಅಲ್ಲಿ ಪಕ್ಷ ಹೆಚ್ಚಿನ ಪ್ರಚಾರ ನಡೆಸಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಹಾಕಿದೆ ಎಂದು ತಿಳಿದುಬಂದಿದೆ.