ನಾನು ಎಲ್ಲರ ಸ್ಪೀಕರ್ ; ಸಚಿವ ಜಮೀರ್ ಹೇಳಿಕೆಗೆ ಯು.ಟಿ. ಖಾದರ್ ಆಕ್ಷೇಪ..!
ಮಂಗಳೂರು: ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಹೇಳುವ ಮೂಲಕ ಸಚಿವ ಝಮೀರ್ ಅಹ್ಮದ್ ಹೇಳಿಕೆಗೆ ಸ್ಪೀಕರ್ ಯು.ಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಹಾಗೂ ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.
ನಾನು ಯಾರ ಹೇಳಿಕೆಗೂ ಕಮೆಂಟ್ ಮಾಡೋದಿಲ್ಲ. ನನ್ನನ್ನು ಜಾತಿ, ಧರ್ಮದ ಆಧಾರದಲ್ಲಿ ಯಾರು ಸಹ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಜಮೀರ್ ಒಬ್ಬ ಮತಾಂಧ, ಮುಸ್ಲಿಂ ಭೂತ ಹಿಡಿದಿದೆ: ಮುತಾಲಿಕ್ ಕಿಡಿ
ಚಿಕ್ಕೋಡಿ: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ (Zameer Ahmed) ಒಬ್ಬ ಮತಾಂಧ ಎಂದು ಶ್ರೀರಾಮ ಸೇನಾ (Sri Ram Sena) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.
ಸಭಾಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವ್ಯಕ್ತಿ ನೇಮಕ ಮಾಡಿದ್ದಕ್ಕೆ ಬಿಜೆಪಿ (BJP) ಶಾಸಕರು ಕೈ ಮುಗಿಯುತ್ತಾರೆ ಎನ್ನುವ ಜಮೀರ್ ಹೇಳಿಕೆಗೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಮೀರ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಬೇಕು. ಜಮೀರ್ ಅಹ್ಮದ್ ಅವರ ಹೇಳಿಕೆ ನಾನು ವಿರೋಧಿಸುತ್ತೇನೆ. ಸಭಾಧ್ಯಕ್ಷ ಸ್ಥಾನ ಅತ್ಯಂತ ಪವಿತ್ರವಾದದ್ದು. ಆ ಸ್ಥಾನದಲ್ಲಿ ಕೂತವರು ವ್ಯಕ್ತಿಯಲ್ಲ, ಅದೊಂದು ಶಕ್ತಿ. ಜಾತಿ, ಪಕ್ಷ, ಧರ್ಮ, ಭಾಷೆ ಬೇಧವಿಲ್ಲದೇ ಕುಳಿತಿರುವ ವ್ಯಕ್ತಿಯನ್ನು ಮುಸ್ಲಿಂ ಎಂದು ಗುರುತಿಸಿದ್ದು ಸಂವಿಧಾನ ವಿರೋಧಿ ಎಂದು ಹರಿಹಾಯ್ದರು.
ಜಮೀರ್ ಹೇಳಿಕೆ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗೆ ಹಾಕಬೇಕು. ಮತಾಂಧತೆಯ ಪ್ರವೃತ್ತಿ ಅತಿಯಾಗಿ ಜಮೀರ್ ಅಹ್ಮದ್‌ಗೆ ಮುಸ್ಲಿಂ ಭೂತ ಹಿಡಿದಿದೆ. ಈ ಭೂತ ಸರಿಯಲ್ಲ. ಭಾರತದಲ್ಲಿ ಈ ರೀತಿ ಹೇಳುವುದು ಸರಿಯಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಹೇಳಲಿ. ಸಂವಿಧಾನಬದ್ಧ ಸಭಾಧ್ಯಕ್ಷ ಪವಿತ್ರ ಸ್ಥಾನಕ್ಕೆ ಅಪಚಾರ ಮಾಡಿದ್ದಾರೆ. ನಾಚಿಕೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಬಿಜೆಪಿ ಅವರು ಸ್ವಲ್ಪ ಬಾಯಿ ತೆಗೆದು ವ್ಯಕ್ತಿ ವಿರುದ್ಧ ಹೋರಾಟ ನಡೆಸಲಿ. ಜಮೀರ್ ಅಹ್ಮದ್ ಅವರ ಶಾಸಕ ಸ್ಥಾನ ರದ್ದಾಗುವವರೆಗೂ ಬಿಜೆಪಿ ಅವರು ಹೋರಾಟ ಮಾಡಲಿ ಎಂದು ಒತ್ತಾಯಿಸಿದರು.