"ಅವರ ಗುಣ ಮತ್ತು ಸ್ವಭಾವ ನನಗೆ ಸರಿಹೊಂದುತ್ತದೆ" - ಭಾರತೀಯ ಈ ಕ್ರಿಕೆಟಿಗನನ್ನು ಹೊಗಳಿದ ದಿಗ್ಗಜ ವಿವಿಯನ್ ರಿಚರ್ಡ್ಸ್

ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಇವರ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟೂ ದಾಖಲೆಗಳು ಸೇರಿವೆ, ತನ್ನ ಆಟದಿಂದಲೇ ಎಲ್ಲರ ಮನಗೆದ್ದ ವಿರಾಟ್ ಇದೀಗ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್’ಮನ್ ಎಂದೇ ಖ್ಯಾತಿ ಪಡೆದ ವೆಸ್ಟ್ ಇಂಡೀಸ್ ದಿಗ್ಗಜ ಸರ್ ವಿವಿಯನ್ ರಿಚರ್ಡ್ಸ್ ವಿರಾಟ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಸಚಿನ್ ತೆಂಡೂಲ್ಕರ್ ಅಥವಾ ರಿಕಿ ಪಾಂಟಿಂಗ್ ಆಗಿರಲಿ, ಪ್ರತಿಯೊಬ್ಬ ಶ್ರೇಷ್ಠ ಕ್ರಿಕೆಟಿಗರು ವಿರಾಟ್ ಅವರನ್ನು ಹೊಗಳಿರುವುದನ್ನು ನಾವು ನೋಡಿರಬಹುದು. ಇದಲ್ಲದೇ ವಿರಾಟ್ ಕೊಹ್ಲಿಯ ಫ್ಯಾನ್ ಫಾಲೋಯಿಂಗ್ ಕೂಡ ತುಂಬಾ ಸ್ಟ್ರಾಂಗ್ ಆಗಿದೆ. ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ತಮ್ಮ ದಿನಚರಿಯ ಬಗ್ಗೆ ಆಗಾಗ್ಗೆ ಪೋಸ್ಟ್ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸುತ್ತಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸರ್ ವಿವಿಯನ್ ರಿಚರ್ಡ್ಸ್ ಅವರು ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ವಿರಾಟ್ ಕೊಹ್ಲಿ ಬಗ್ಗೆ ಸರ್ ವಿವಿಯನ್ ರಿಚರ್ಡ್ಸ್ ನೀಡಿದ ಈ ಹೇಳಿಕೆಯ ನಂತರ, ಅನೇಕ ಜನರು ಅವರನ್ನು ಮತ್ತಷ್ಟು ಬೆಂಬಲಿಸಲು ಪ್ರಾರಂಭಿಸಿದ್ದಾರೆ.
ಸರ್ ವಿವಿಯನ್ ರಿಚರ್ಡ್ಸ್ ಇತ್ತೀಚೆಗೆ ಐಸಿಸಿಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿರಾಟ್ ಬಗ್ಗೆ ಮಾತನಾಡಿದ ವಿವಿಯನ್ ರಿಚರ್ಡ್ಸ್, “ನಾನು ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಪ್ರೀತಿಸುತ್ತೇನೆ. ಅವರಿಗೆ ತನ್ನ ಮೇಲೆ ನಂಬಿಕೆ ಇದೆ. ನನಗೂ ನನ್ನ ಮೇಲೆ ನಂಬಿಕೆ ಇತ್ತು. ಅವರ ಪಾತ್ರ, ದೃಢತೆ ಮತ್ತು ಅವರ ಇಚ್ಛಾಶಕ್ತಿ ನನ್ನಂತೆಯೇ ಇದೆ” ಎಂದು ಹೇಳಿಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ತಮ್ಮ ವೃತ್ತಿಜೀವನದ 111 ಟೆಸ್ಟ್ ಪಂದ್ಯಗಳಲ್ಲಿ 49.29 ರ ಸರಾಸರಿಯಲ್ಲಿ 8676 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ, 275 ಏಕದಿನ ಪಂದ್ಯಗಳನ್ನಾಡಿದ್ದು, 57.32 ಸರಾಸರಿಯಲ್ಲಿ 12898 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್’ನಲ್ಲಿ 115 ಪಂದ್ಯಗಳನ್ನಾಡಿದ್ದು 52.73 ಸರಾಸರಿಯಲ್ಲಿ 4008 ರನ್ ಗಳಿಸಿದ್ದಾರೆ.