ಕಾಶ್ಮೀರದಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ; ಕನ್ನಡಿಗ ಸೇನಾಧಿಕಾರಿ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ!
ಶ್ರೀನಗರ/ಮಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಎನ್‌ಕೌಂಟರ್ ವೇಳೆ ಕರ್ನಾಟಕ ಮೂಲದ ಸೇನಾಧಿಕಾರಿಯೂ ಸೇರಿ ನಾಲ್ವರು ಹುತಾತ್ಮರಾಗಿದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕಾಲಕೋಟ್ ಎಂಬಲ್ಲಿ ನಡೆದ ಉಗ್ರರು ಹಾಗೂ ಸೇನೆ, ಪೊಲೀಸ್ ಸಿಬ್ಬಂದಿ ನಡುವಿನ ಗುಂಡಿನ ಕಾಳಗದಲ್ಲಿ ಕರ್ನಾಟಕದ ಬೆಂಗಳೂರು ಮೂಲದ ಸೇನಾಧಿಕಾರಿ, ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಪ್ರಾಂಜಲ್ ವೆಂಕಟೇಶ್ ಹುತಾತ್ಮರಾಗಿದ್ಧಾರೆ. ಇವರೊಂದಿಗೆ ಇನ್ನೊಬ್ಬರು ಸೇನಾಧಕಾರಿ ಹಾಗೂ ಇಬ್ಬರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರು ಹುತಾತ್ಮರಾದ ಹಿನ್ನೆಲೆಯಲ್ಲಿ ಉಗ್ರರನ್ನು ಸೆದೆಬಡಿಯಲು ಸೇನಾ ಪಡೆ ಹಾಗೂ ಪೊಲೀಸ್ ಪಡೆಗಳು ಕಾಲಕೋಟ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿವೆ.
ಕಾಲಕೋಟ್ ಸಮೀಪದ ಪಿರ್ ಪಂಜಾಲ್ ದಟ್ಟಾರಣ್ಯ ಪ್ರದೇಶದಲ್ಲಿ ಉಗ್ರರು ಸೇರಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಸೇನಾ ಪಡೆ ಆ ಪ್ರದೇಶದಲ್ಲಿ ಕೂಂಬಿಂಗ್ ತೀವ್ರಗೊಳಿಸಿದ್ದವು. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪಡೆಗಳು ಸೇನಾ ಬೆಂಬಲಕ್ಕೆ ನಿಂತಿದ್ದರು. ಬುಧವಾರ ಸಂಜೆ ವೇಳೆ ಖಚಿತ ಮಾಹಿತಿ ಮೇರೆಗೆ ಸೇನಾ ಸಿಬ್ಬಂದಿ ದಾಳಿ ನಡೆಸಿದ್ದವು. ಈ ವೇಳೆ ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಉಗ್ರರಿದ್ದ ನಿಖರ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಅತ್ತಲಿಂದಲೂ ಗುಂಡಿನ ದಾಳಿ ಮಾಡಲಾಗಿತ್ತು. ಸೇನಾ ತಂಡ ಮುನ್ನುಗ್ಗುವಾಗ ಉಗ್ರರು ನಡೆಸಿದ ದಾಳಿ ವೇಳೆ ಇಬ್ಬರು ಸೇನಾಧಿಕಾರಿಗಳು ಹಾಗೂ ಇಬ್ಬರು ಸೈನಿಕರು ಹುತಾತ್ಮರಾದರು. ಇದೇ ಪ್ರದೇಶದಲ್ಲಿ ಕೆಲ ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಕರ್ನಾಟಕದ ಪ್ರಾಂಜಲ್ ವೆಂಕಟೇಶ್ ಕೂಡ ಇದ್ದರು. ಕೂಡಲೇ ಹುತಾತ್ಮರಾದವರ ದೇಹಗಳನ್ನು ಸೇನಾ ಶಿಬಿರಕ್ಕೆ ತರಲಾಯಿತು.
ಕಾಶ್ಮೀರದ ಪಿರ್ ಪಿಂಜಾಲ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಉಗ್ರರ ಸೆರೆ ಇಲ್ಲವೇ ಹಿಮ್ಮೆಟ್ಟಿಸುವ ಕಾರ್ಯ ಸೇನಾ ಪಡೆಗಳು ಹಾಗೂ ಪೊಲೀಸ್ ಬಲಕ್ಕೆ ದೊಡ್ಡ ಸವಾಲೇಗಿಯೇ ಪರಿಣಮಿಸಿದೆ. ಇಲ್ಲಿನ ಕಣಿವೆ ಪ್ರದೇಶ, ದಟ್ಟಾರಣ್ಯದಲ್ಲಿ ಅಡಗಿ ನಿರಂತರವಾಗಿ ಕಾರ್ಯಾಚರಣೆಯನ್ನು ಉಗ್ರರು ನಡೆಸುತ್ತಲೇ ಇದ್ದಾರೆ. ಕೆಲವು ವರ್ಷಗಳಿಂದ ಇಲ್ಲಿ ನಿರಂತರ ದಾಳಿ, ಪ್ರತಿದಾಳಿಗಳು ನಡೆಯುತ್ತಲೇ ಇವೆ. ಕೆಲ ದಿನಗಳ ಹಿಂದೆ ಇದೇ ರೀತಿ ದಾಳಿ ನಡೆಸಿ ಭದ್ರತಾ ಸಿಬ್ಬಂದಿಗಳು ಉಗ್ರರೊಬ್ಬರನ್ನು ಹೊಡೆದು ಸಾಯಿಸಿದ್ದರು.
Bad News!!
— Desert Scorpion🦂🇮🇳 (@TigerCharlii) November 23, 2023
Indian Army lost Braveheart
Captain MV Pranjal
63 Rashtriya Rifles
in Rajouri encounter yesterday!
He hailed from Karnataka
(NOK informed)
Salute Saab 🇮🇳#IndianArmy #Rajouri #Encounter pic.twitter.com/zLxDnSyHA6
ಪ್ರಾಂಜಲ್ ಯಾರು?
ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಹಾಗೂ ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. 28ರ ಹರೆಯದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಮಂಗಳೂರಿನಲ್ಲಿಯೇ ಹುಟ್ಟಿ ಬಾಲ್ಯ ಕಳೆದು ಬಳಿಕ ಭಾರತೀಯ ಸೇನಾಪಡೆಯನ್ನು ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಾಂಜಲ್ ಮಂಗಳೂರಿನ ಎಂಆರ್ ಪಿಎಲ್ ನಿವೃತ್ತ ಎಂಡಿ ವೆಂಕಟೇಶ್ ಹಾಗೂ ಅನುರಾಧ ದಂಪತಿಯ ಏಕೈಕ ಪುತ್ರ. ಎಂಆರ್ ಪಿಎಲ್ ಡೆಲ್ಲಿ ಸ್ಕೂಲ್ ನಲ್ಲಿ ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದು ಇವರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್ ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.
ಬುಧವಾರ ಬೆಳಗ್ಗೆ ಜಮ್ಮು – ಕಾಶ್ಮೀರದ ರಜೌರಿಯಲ್ಲಿ ನಡೆದ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಪ್ರಾಂಜಲ್ ಹುತಾತ್ಮರಾಗಿದ್ದಾರೆ. ಪ್ರಾಂಜಲ್ ರೊಂದಿಗೆ 9ಪಿಎಆರ್ ಎ ಕ್ಯಾಪ್ಟನ್ ಶುಭಂ, ಮತ್ತು ಹವಾಲ್ದಾರ್ ಮಜೀದ್ ಮೃತರಾಗಿದ್ದಾರೆ. ಐದರಿಂದ ಆರು ಮಂದಿಯ ಉಗ್ರರ ಗುಂಪು ದಾಳಿ ಮಾಡಿತ್ತು. ಈ ಉಗ್ರರ ಬೇಟೆಗೆ ಭಾರತೀಯ ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ಪ್ರಾಂಜಲ್ ಸಾವಿನ ಹಿನ್ನಲೆ ಎಂಆರ್ ಪಿ ಎಲ್ ಡೆಲ್ಲಿ ಶಾಲೆಗೆ ಗುರುವಾರ ರಜೆ ಘೋಷಿಸಲಾಗಿದೆ.
ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಅವಿಭಜಿತ ದಕ್ಷಿಣ ಕನ್ನಡದವರಾಗಿದ್ದ, ಮೇ.31ರಂದು ಎಂಆರ್ ಪಿಎಲ್ ನ ಎಂಡಿ ಪದವಿಯಿಂದ ನಿವೃತ್ತರಾಗಿದ್ದರು. ಇವರ ನಿವೃತ್ತಿ ಸಮಾರಂಭಕ್ಕೆ ಪ್ರಾಂಜಲ್ ಆಗಮಿಸಿದ್ದರು. ಸದ್ಯ ವೆಂಕಟೇಶ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪ್ರಾಂಜಲ್ ಅವರ ಪತ್ನಿ ಚೆನ್ನೈ ಐಐಟಿಯಲ್ಲಿ ಎಂಟೆಕ್ ಮಾಡುತ್ತಿದ್ದಾರೆ.
ಕ್ಯಾ| ಪ್ರಾಂಜಲ್ ಅವರ ಪಾರ್ಥಿವ ಶರೀರ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದು, ಬನ್ನೇರುಘಟ್ಟದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.