ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಹಂತಕನ ಪುತ್ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ; ಯಾವ ಕ್ಷೇತ್ರದಿಂದ?
ಚಂಡಿಗಢ: ಲೋಕಸಭಾ ಚುನಾವಣೆ (Lok Sabha Election 2024)ಯ ಅಖಾಡ ರಂಗೇರಿದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಟಕ್ಕೆ ಸಜ್ಜಾಗಿವೆ. ಕೆಲವೊಂದು ಕ್ಷೇತ್ರ ತಮ್ಮ ವಿಶಿಷ್ಟ ಅಭ್ಯರ್ಥಿಗಳ ಕಾರಣದಿಂದ ದೇಶದ ಗಮನ ಸೆಳೆಯುತ್ತಿವೆ. ಇಂತಹ ಕ್ಷೇತ್ರಗಳ ಪೈಕಿ ಪಂಜಾಬ್‌ನ ಫರಿದ್ಕೋಟ್ (ಎಸ್‌ಸಿ ಮೀಸಲು) ಕ್ಷೇತ್ರವೂ ಒಂದು. ಇಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಹಂತಕರ ಪೈಕಿ ಒಬ್ಬರ ಪುತ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದೇ ಇದಕ್ಕೆ ಕಾರಣ. ಇಂದಿರಾ ಗಾಂಧಿ ಅವರ ಇಬ್ಬರು ಹಂತಕರಲ್ಲಿ ಒಬ್ಬನಾದ ಬಿಯಾಂತ್ ಸಿಂಗ್ (Beant Singh)ನ ಪುತ್ರ ಸರಬ್ಜಿತ್ ಸಿಂಗ್ ಖಾಲ್ಸಾ (Sarabjeet Singh Khalsa) (45) ಇಲ್ಲಿ ಕಣಕ್ಕಿಳಿದಿದ್ದಾರೆ.
ಮೊದಲ ಸಲವಲ್ಲ
12ನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿರುವ ಸರಬ್ಜಿತ್ ಸಿಂಗ್ ಖಾಲ್ಸಾ ಈ ಹಿಂದೆಯೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2014 ಮತ್ತು 2009ರಲ್ಲಿ ಸರಬ್ಜಿತ್ ಸಿಂಗ್ ಖಾಲ್ಸಾ ಅವರು ಕ್ರಮವಾಗಿ ಫತೇಘರ್ ಸಾಹಿಬ್ (ಮೀಸಲು) ಮತ್ತು ಬಟಿಂಡಾ ಸ್ಥಾನಗಳಿಂದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಸೋತಿದ್ದರು. 2019ರಲ್ಲಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ 1984ರ ಅಕ್ಟೋಬರ್ 31ರಂದು ಗುಂಡು ಹಾರಿಸಿ ಅವರನ್ನು ಕೊಲೆ ಮಾಡಿದ್ದರು. 2014ರಲ್ಲಿ ಸರಬ್ಜಿತ್ ಸಿಂಗ್ ಖಾಲ್ಸಾ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 3.5 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು. ಅವರ ತಾಯಿ ಬಿಮಲ್ ಕೌರ್ ಮತ್ತು ಅವರ ಅಜ್ಜ ಸುಚಾ ಸಿಂಗ್ 1989ರಲ್ಲಿ ಕ್ರಮವಾಗಿ ರೋಪರ್ ಮತ್ತು ಬಟಿಂಡಾದಿಂದ ಸಂಸದರಾಗಿದ್ದರು.
ಸರಬ್ಜಿತ್ ಸಿಂಗ್ ಖಾಲ್ಸಾ ಹಿಂದೆ ಗಳಿಸಿದ ಮತಗಳೆಷ್ಟು?
ಸರಬ್ಜೀತ್ 2004ರಲ್ಲಿ ಬಟಿಂಡಾದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ 1,13,490 ಮತ ಪಡೆದಿದ್ದರು. ಇದಲ್ಲದೆ ಅವರು 2007ರಲ್ಲಿ ಬರ್ನಾಲಾ ಜಿಲ್ಲೆಯ ಭದೌರ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 15,702 ಮತಗಳನ್ನು ಪಡೆದಿದ್ದರು. ಅವರ ತಾಯಿ ಬಿಮಲ್ ಕೌರ್ ಖಾಲ್ಸಾ 1989ರಲ್ಲಿ ಸುಮಾರು 4,24,010 ಮತಗಳನ್ನು ಪಡೆಯುವ ಮೂಲಕ ರೋಪರ್‌ನಿಂದ ಸಂಸದರಾಗಿದ್ದರು ಮತ್ತು ಅದೇ ವರ್ಷ ಅಜ್ಜ ಸುಚಾ ಸಿಂಗ್ 3,16,979 ಮತಗಳನ್ನು ಪಡೆಯುವ ಮೂಲಕ ಬಟಿಂಡಾ ಸಂಸದರಾಗಿದ್ದರು.
ಯಾರೆಲ್ಲ ಪ್ರತಿಸ್ಪರ್ಧಿಗಳು?
ಈ ಬಾರಿ ಪಂಜಾಬ್‌ನ ಫರಿದ್ಕೋಟ್ ಕ್ಷೇತ್ರದಲ್ಲಿ ಖ್ಯಾತ ಗಾಯಕ ಹನ್ಸ್ ರಾಜ್ ಹನ್ಸ್ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ನಟ-ಗಾಯಕ ಕರಮ್ಜಿತ್ ಅನ್ಮೋಲ್ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಎಸ್ಎಡಿ ಮತ್ತು ಕಾಂಗ್ರೆಸ್ ಇನ್ನೂ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಜಾನಪದ ಗಾಯಕ, ಕಾಂಗ್ರೆಸ್‌ಮ ಮೊಹಮ್ಮದ್ ಸಾದಿಕ್ ಸದ್ಯ ಇಲ್ಲಿನ ಸಂಸದರಾಗಿದ್ದಾರೆ. ಒಟ್ಟಿನಲ್ಲಿ ಈ ಕ್ಷೇತ್ರ ಇದೀಗ ಅಭ್ಯರ್ಥಿಗಳ ಕಾರಣದಿಂದಲೇ ಗಮನ ಸೆಳೆದಿದೆ. ಮತದಾರ ಯಾರತ್ತ ಒಲವು ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.