ಕಾಂಗ್ರೆಸ್ ಎಂಎಲ್‌ಸಿ ಸೇರಿ ಐವರ ವಿರುದ್ಧ ಎಫ್ಐಆರ್
ಬೆಳಗಾವಿ, ಡಿಸೆಂಬರ್ 5: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ (Pruthwi Singh) ಮೇಲೆ ಚಾಕು ಇರಿತ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi), ಅವರ ಇಬ್ಬರು ಆಪ್ತರು ಹಾಗೂ ಇಬ್ಬರು ಗನ್‌ಮ್ಯಾನ್‌ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 1860 (U/s 143, 147, 148, 323, 324, 379, 504, 506), ಅಟ್ರಾಸಿಟಿ ಕೇಸ್, ಐಪಿಸಿ ಸೆಕ್ಷನ್ 1989 (u/s-3(1), (r)(s), 3(2)(v-a), IPC 1860(u/s-149 ರಡಿ ಪ್ರಕರಣ ದಾಖಲಿಸಲಾಗಿದೆ.
ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಆಪ್ತ ಸುಜಿತ್ ಜಾಧವ್, ಸದ್ದಾಂ, ಚನ್ನರಾಜ ಹಟ್ಟಿಹೊಳಿಯ ಇಬ್ಬರು ಗನ್‌ಮ್ಯಾನ್‌ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೃಥ್ವಿ ಸಿಂಗ್ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ.
ಪೃಥ್ವಿ ಸಿಂಗ್ ಮೇಲೆ ಸೋಮವಾರ ಚಾಕುವಿನಿಂದ ಇರಿಯಲಾಗಿತ್ತು. ಅದಾದ 18 ಗಂಟೆಗಳ ಬಳಿಕ, ಅಂದರೆ ಮಂಗಳವಾರ ಮಧ್ಯಾಹ್ನ ಆರೋಪಿಗಳ ವಿರುದ್ಧ ಪೃಥ್ವಿ ಸಿಂಗ್ ಪುತ್ರ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ.
ನಡೆದಿದ್ದೇನು?
ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ ಅತ್ಯಾಪ್ತ ಪೃಥ್ವಿ ಸಿಂಗ್ ಮೇಲೆ ಸೋಮವಾರ ಸಂಜೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಆಪ್ತರು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದರು. ಬೆಳಗಾವಿ ಜಿಲ್ಲೆಯ ಜಯನಗರದಲ್ಲಿ ಘಟನೆ ನಡೆದಿತ್ತು. ಪೃಥ್ವಿ ಸಿಂಗ್ ಅವರ ಕೈ ಹಾಗೂ ಬೆನ್ನಿಗೆ ಗಾಯಗಳಾಗಿದ್ದು, ಅವರನ್ನು ಬಳಿಕ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯು ಬಳಿಕ ರಾಜಕೀಯ ತಿರುವು ಪಡೆದುಕೊಂಡಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಹಾಗೂ ಇತರ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದರು. ಇದರ ಬೆನ್ನಲ್ಲೇ ಪೃಥ್ವಿ ಸಿಂಗ್ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದರು.
RSS ವಸ್ತು ಸಂಗ್ರಹಾಲಯ ಪ್ರವೇಶಕ್ಕೆ ಗೂಳಿಹಟ್ಟಿ ಶೇಖರ್ಗೆ ನಿರಾಕರಣೆ: ಮೌನಕ್ಕೆ ಶರಣಾದ ಬಿಜೆಪಿ ನಾಯಕರು
ಬೆಂಗಳೂರು, (ಡಿಸೆಂಬರ್ 06): ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ (goolihatti shekhar)ಅವರನ್ನು ನಾಗಪುರದ ಆರ್ಎಸ್ಎಸ್ (RSS) ಹೆಡಗೇವಾರ್ ವಸ್ತು ಸಂಗ್ರಹಾಲಯದ ಪ್ರವೇಶಕ್ಕೆ ನಿರಾಕರಿಸಿದ್ದಾರೆ. ಇದಕ್ಕೆ ಕಾರಣವೇನು ಎನ್ನುವುದನ್ನು ಸ್ಪಷ್ಟಪಡಿಸುವಿರಾ ಎಂದು ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಕೇಳಿದ್ದು, ಇದೀಗ ಆಡಿಯೋ ವೈರಲ್ ಆಗಿದೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಕಾಂಗ್ರೆಸ್ ಬಿಜೆಪಿ ಹಾಗೂ ಆರ್ಎಸ್ಎಸ್ ಮೇಲೆ ಮುಗಿಬಿದ್ದಿದೆ. ಆದ್ರೆ, ಬಿಜೆಪಿ ನಾಯಕರು ಯಾವುದೇ ಹೇಳಿಕೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.
ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಗೆ RSS ವಸ್ತು ಸಂಗ್ರಹಾಲಯದಲ್ಲಿ ಪ್ರವೇಶ ನಿರಾಕರಣೆ ವಿಚಾರದಿಂದ ಬಿಜೆಪಿ ನಾಯಕರು ಅಂತರ ಕಾಪಾಡಿಕೊಂಡಿಕೊಳ್ಳುತ್ತಿದ್ದಾರೆ. ಆರ್ಎಸ್ಎಸ್ ಎಲ್ಲಾ ಸಮುದಾಯವನ್ನು ಒಳಗೊಂಡ ಸಂಘಟನೆಯಾಗಿದೆ. ಇಲ್ಲಿ ಜಾತಿ ತಾರತಮ್ಯ ವ್ಯವಸ್ಥೆ ಇಲ್ಲ ಎಂದು ಉದ್ದುದ್ದ ಭಾಷಣ ಬಿಗಿಯುತ್ತಿದ್ದವರು ಇದೀಗ ಗೂಳಿಹಟ್ಟಿ ಶೇಖರ್ ವಿಚಾರದಲ್ಲಿ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.ಈ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದೆ ಬರುತ್ತಿಲ್ಲ.
ಇದೇ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದರ ಬಗ್ಗೆ ತಿಳಿದುಕೊಂಡು ಮಾತಾಡುತ್ತೇನೆ. ನಿಮ್ಮಷ್ಟು ಬುದ್ದಿವಂತ ನಾನಲ್ಲ ಎಂದು ಕೈಮುಗಿದು ಹೊರಟು ಹೋದರು. ಇನ್ನು ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಇದಕ್ಕೂ ತಮಗೂ ಸಂಬಂಧವಿಲ್ಲವಂತೆ ವಿಪಕ್ಷ ನಾಯಕ ಆರ್ ಅಶೋಕ್ ಮುಂದೆ ಹೋದರು.
ಬಿಜೆಪಿಯ ಗರ್ಭಗುಡಿಗೇ ದಲಿತರಿಗೆ ಪ್ರವೇಶವಿಲ್ಲ ಎಂದ ಕಾಂಗ್ರೆಸ್
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಗೂಳಿಹಟ್ಟಿ ಶೇಖರ್ ಬಿಜೆಪಿಯ ಮಾಜಿ ಸಚಿವ, ಮಾಜಿ ಶಾಸಕ. ಜನಪ್ರತಿನಿಧಿಯಾಗಿದ್ದ ಬಿಜೆಪಿ ಪಕ್ಷದವರೇ ನಾಗಪುರದ RSS ಕಚೇರಿಯಲ್ಲಿ ಅಸ್ಪೃಶ್ಯತೆ ಎದುರಿಸಿದೆ ಎಂದು ಹೇಳಿದ್ದಾರೆ. RSSನ ಮುದ್ದಿನ ಕೂಸು ಬಿಎಲ್ ಸಂತೋಷ್ ಅವರ ಬಳಿ ತಮಗಾದ ನೋವು, ಅವಮಾನದ ಬಗ್ಗೆ ಅವಲತ್ತುಕೊಂಡರೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಈ ಮೌನದ ಅರ್ಥ ಅಸ್ಪೃಶ್ಯತೆ ಆಚರಣೆ ಬಿಜೆಪಿ, RSSನ ಜನ್ಮಸಿದ್ದ ಹಕ್ಕು ಎನ್ನುವುದೇ? ಎಂದು ಪ್ರಶ್ನಿಸಿದೆ.
RSS ಗರ್ಭಗುಡಿ ಇರಲಿ, ಬಿಜೆಪಿಯ ಗರ್ಭಗುಡಿಗೇ ದಲಿತರಿಗೆ ಪ್ರವೇಶವಿಲ್ಲ, ಬಿಜೆಪಿಯಲ್ಲಿರುವ ದಲಿತರು RSSನವರ ಚಡ್ಡಿ ಹೊರುವುದಕ್ಕೆ ಮಾತ್ರ ಸೀಮಿತವೆನ್ನುವ ಸತ್ಯ ಜಗಜ್ಜಾಹೀರಾಗಿದೆ. ದಲಿತ ಎಂಬ ಕಾರಣಕ್ಕಾಗಿಯೇ ಗೋವಿಂದ ಕಾರಜೋಳರಂತಹ ಹಿರಿಯ ನಾಯಕರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಿಲ್ಲವೇ? ದಲಿತ ಎಂಬ ಕಾರಣಕ್ಕಾಗಿಯೇ ಶ್ರೀರಾಮುಲು ಅವರು ರಾಜ್ಯಾಧ್ಯಕ್ಷ ಸ್ಥಾನ ಬಯಸಿದರೂ ಸಿಗಲಿಲ್ಲವೇ? ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ವ್ಯಂಗ್ಯವಾಡಿದೆ.
ಬಿಜೆಪಿಯಲ್ಲಿ ದಲಿತರಿಗೆ ಹಿಂದುಳಿದವರಿಗೆ ಗೌರವ ಇಲ್ವಾ?
ಇನ್ನು ಈ ಬಗ್ಗೆ ಸಚಿವ ಪ್ರಿಯಾಂಖ್ ಖರ್ಗೆ ಪ್ರತಿಕ್ರಿಯಿಸಿ, ಗೂಳಿಹಟ್ಟಿ ಶೇಖರ್ ಮಾಜಿ ಸಚಿವರು . ಬಹಳ ಸ್ಪಷ್ಟವಾದ ಪ್ರಶ್ನೆ ಬಿಎಲ್ ಸಂತೋಷ ಅವರಿಗೆ ಕೇಳಿದ್ದಾರೆ. ನಾನು ಬಿಜೆಪಿಯ ಕಾರ್ಯಕರ್ತ, ನಾನು ಹಿಂದೂ ಆರ್ ಎಸ್ ಎಸ್ ಪ್ರಮುಖರ ಮನೆಗೆ ಭೇಟಿ ನೀಡಲು ಹೋದಾಗ, ನಾನು ಎಸ್ಸಿ ಎಂದು ತಿಳಿದು ನನಗೆ ಒಳಗಡೆ ಬಿಡಲಿಲ್ಲ ಎಂದು ಹೇಳಿದ್ದು, ಇದಕ್ಕೆ ಉತ್ತರಿಸಿ ಎಂದು ಸಹ ಸಂತೋಷ್ ಅವರಿಗೆ ಕೇಳಿದ್ದಾರೆ. ಅಲ್ಲದೇ ಬಿಜೆಪಿಯಲ್ಲಿರುವ ಪ್ರಮುಖ ದಲಿತ ನಾಯಕರಿಗೂ ಪ್ರವೇಶ ಇಲ್ವಾ ಎಂದು ಪ್ರಶ್ನೆ ಕೇಳಿದ್ದಾರೆ. ಹಾಗಾದ್ರೆ, ಬಿಜೆಪಿಯಲ್ಲಿ ದಲಿತರಿಗೆ ಹಿಂದುಳಿದವರಿಗೆ ಗೌರವ ಇಲ್ವಾ, ಇದು ನನ್ನ ಪ್ರಶ್ನೆ ಅಲ್ಲ, ಅದು ಗೂಳಿಹಟ್ಟಿ ಪ್ರಶ್ನೆ. ಸಾಮಾನ್ಯವಾಗಿ ಆರ್ ಎಸ್ ಎಸ್ ನಲ್ಲಿ ದಲಿತರಿಗೆ ಅವಕಾಶ ಇದ್ಯಾ? ಇದ್ದರೆ ದಲಿತರನ್ನು ಸರಸಂಘ ಚಾಲಕರನ್ನಾಗಿ ಮಾಡಲಿ ಎಂದು ಸವಾಲು ಹಾಕಿದರು.