ಫಿನಿಷರ್ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಿಂದ ಆರ್‌ಸಿಬಿಗೆ ಮೊದಲ ರೋಚಕ ಗೆಲುವು..!
ದಿನೇಶ್ ಕಾರ್ತಿಕ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಪದ್ಭಾಂಧವರಾಗಿದ್ದಾರೆ. ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 10 ಎಸೆತಗಳಲ್ಲಿ 3 ಬೌಂಡರಿ ಎರಡು ಸಿಕ್ಸರ್ ಸಹಿತ 28 ರನ್ ಗಳಿಸಿದ ಅವರು ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ದದ ಐಪಿಎಲ್ 2024ರ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಈ ಐಪಿಎಲ್‌ನಲ್ಲಿ ಗೆಲುವಿನ ಅಧ್ಯಾಯ ಆರಂಭವಾಗಿದೆ.
ಚಿನ್ನಸ್ವಾಮಿಯಲ್ಲಿ ಕೊಹ್ಲಿ, ಡಿಕೆ ಅಬ್ಬರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಆಘಾತ ಅನುಭವಿಸಿತು. ಒಂದು ಕಡೆಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದರೆ ಮತ್ತೊಂದು ಕಡೆ ವಿಕೆಟ್ ಕಳೆದುಕೊಳ್ಳುತ್ತಿತ್ತು. ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ 11 ಬೌಂಡರಿ 2 ಸಿಕ್ಸರ್ ಸಹಿತ 77 ರನ್ ಗಳಿಸಿ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಫಾಫ್ ಡುಪ್ಲೆಸಿಸ್ (3 ರನ್), ಕ್ಯಾಮೆರಾನ್ ಗ್ರೀನ್ (3 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (3ರನ್), ಅನುಜ್ ರಾವತ್ (11 ರನ್), ಕ್ಯಾಮೆರಾನ್ ಗ್ರೀನ್ (18 ರನ್) ರನ್ ಗಳಿಸಿದರು.
ಅನುಜ್ ರಾವತ್ ಔಟಾದಾಗ ಆರ್ ಸಿಬಿ ತಂಡಕ್ಕೆ 22 ಎಸೆತಗಳಲ್ಲಿ 47 ರನ್ ಗಳ ಅಗತ್ಯವಿತ್ತು. ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಮಹಿಪಾಲ್ ಲೊಮ್ರೋರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಇನ್ನೂ 4 ಎಸೆತ ಬಾಕಿ ಇರುವಂತೆಯೇ ಗುರಿ ತಲುಪಿತು. ಮಹಿಪಾಲ್ ಲೊಮ್ರೋರ್ 8 ಎಸೆತಗಳಲ್ಲಿ 17 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊನೆಯ ಓವರ್ ನಲ್ಲಿ ಆರ್ ಸಿಬಿ ಗೆಲುವಿಗೆ 11 ರನ್ ಇದ್ದಾಗ ದಿನೇಶ್ ಕಾರ್ತಿಕ್ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದರು, ಎರಡನೇ ಎಸೆತ ವೈಡ್ ಆದರೆ, ನಂತರದ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಫಿನಿಷರ್ ಡಿಕೆ ಈಸ್ ಬ್ಯಾಕ್ ಎಂದಿದ್ದಾರೆ. ಐಪಿಎಲ್ ಬಳಿಕ ಟಿ20 ವಿಶ್ವಕಪ್ ಇರುವ ಕಾರಣ ಡಿಕೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಭಾರತ ತಂಡಕ್ಕೆ ಮರಳುವ ಆಸೆ ಹೊಂದಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಹೈ ಸೆಕ್ಯೂರಿಟಿ ನಡುವೆಯೂ ನುಗ್ಗಿ ಬಂದು ಕೊಹ್ಲಿ ಕಾಲು ಹಿಡಿದ ಫ್ಯಾನ್ ಪೊಲೀಸ್ ವಶಕ್ಕೆ
ಐಪಿಎಲ್ 2024ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ ನಡುವೆ ರೋಚಕ ಪಂದ್ಯ ನಗರದ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಿತು. ಈ ವೇಳೆ ಭದ್ರತಾ ವೈಫಲ್ಯ ಉಂಟಾಗಿದೆ. ಓರ್ವ ಅಭಿಮಾನಿ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯ ಕಾಲು ಹಿಡಿದಿದ್ದಾನೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಬರುತ್ತಿದ್ದಂತೆ ಕ್ರೀಸ್ಗೆ ನುಗ್ಗಿದ್ದ ಅಭಿಮಾನಿ ಕಾಲು ಹಿಡಿದುಕೊಂಡಿದ್ದಾನೆ. ಹೈ ಸೆಕ್ಯೂರಿಟಿ ನಡುವೆಯೂ ಕೊಹ್ಲಿ ಅಭಿಮಾನಿ ಮೈದಾನಕ್ಕೆ ನುಗ್ಗಿದ್ದು, ಬಳಿಕ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಂದ ಯುವಕನ ವಿಚಾರಣೆ ಮಾಡಲಾಗುತ್ತಿದೆ.