Dhilli Chalo: ರೈತರ ದಿಲ್ಲಿ ಚಲೋ ಪ್ರತಿಭಟನೆಗೆ ಬ್ರೇಕ್ ಹಾಕಲು ಸಿದ್ಧತೆ ; ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಾಜ್ಞೆ ಜಾರಿ..!
2021ರಲ್ಲಿ ರೈತ ಪ್ರತಿಭಟನೆಗಳು ದಿಲ್ಲಿಯಲ್ಲಿ ಆತಂಕಕಾರಿ ವಾತಾವರಣ ನಿರ್ಮಿಸಿದ್ದವು. ಕೆಂಪು ಕೋಟೆಗೆ ನುಗ್ಗಿ ಧ್ವಜ ಹಾರಿಸಿ ರೈತರು ಆರ್ಭಟಿಸಿದ್ದರು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರು, ಇದೀಗ ಮತ್ತೆ ದಿಲ್ಲಿಗೆ ಲಗ್ಗೆ ಇಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ 1 ತಿಂಗಳ ಕಾಲ ನಿಷೇಧಾಜ್ಞೆ ಹೇರಿರುವ ದಿಲ್ಲಿ ಪೊಲೀಸರು, ನಗರದಾದ್ಯಂತ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಿದ್ಧಾರೆ.
ರಾಜಧಾನಿಗೆ ಅಷ್ಟ ದಿಗ್ಬಂಧನವನ್ನೇ ಹಾಕಿದ್ದಾರೆ.ಫೆಬ್ರವರಿ 13 ಮಂಗಳವಾರ ರೈತ ಸಂಘಟನೆಗಳು ದಿಲ್ಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಅಭೂತಪೂರ್ವ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ನಿರಂತರ ಒಂದು ತಿಂಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಐಪಿಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಿದೆ. ಮಾರ್ಚ್ 12ರವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ.ಈ ಸಂಬಂಧ ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಸೋಮವಾರ ಸಮಗ್ರ ಮಾಹಿತಿ ನೀಡಿದ್ದು, ಸುತ್ತೋಲೆಯನ್ನೂ ಹೊರಡಿಸಿದ್ದಾರೆ.
ರಾಷ್ಟ್ರ ರಾಜಧಾನಿ ಹೊಸ ದಿಲ್ಲಿಯಲ್ಲಿ ಮುಂದಿನ ಒಂದು ತಿಂಗಳ ಕಾಲ ಸಾರ್ವಜನಿಕ ಸಮಾವೇಶ, ಮೆರವಣಿಗೆ ಸೇರಿದಂತೆ ಯಾವುದಕ್ಕೂ ಅನುಮತಿ ಇಲ್ಲ. ರಸ್ತೆ ತಡೆ ನಡೆಸುವಂತಿಲ್ಲ. 5ಕ್ಕಿಂತಲೂ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ. ಸಮಾವೇಶಗಳು, ಸಭೆಗಳನ್ನು ಆಯೋಜನೆ ಮಾಡುವಂತಿಲ್ಲ. ಕೆಲವು ಪೂರ್ವ ನಿರ್ಧರಿತ ಹಾಗೂ ಅನುಮತಿ ಪಡೆದಿರುವ ಸಭೆಗಳನ್ನು ಮಾತ್ರ ನಡೆಸಬಹುದಾಗಿದೆ. ಟ್ರಕ್, ಟ್ರ್ಯಾಕ್ಟರ್, ಕಾರು, ವಾಣಿಜ್ಯ ಬಳಕೆ ವಾಹನಗಳು, ಕುದುರೆಗಳಲ್ಲಿ ದಿಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೋಮವಾರ ಸಂಜೆ ಹೊತ್ತಿಗಾಗಲೇ ರೈತರು ದಿಲ್ಲಿಯ ಗಡಿ ಭಾಗಗಳಲ್ಲಿ ಬಂದು ಸೇರಿದ್ದಾರೆ.ಕನಿಷ್ಠ ಬೆಂಬಲ ಬೆಲೆ ಕಾನೂನು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘಟನೆಗಳು ‘ದಿಲ್ಲಿ ಚಲೊ’ ಹಮ್ಮಿಕೊಂಡಿವೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಗಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ ರೂಪಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜದೂರ್ ಮೋರ್ಚಾ ಪ್ರತಿಭಟನೆಗೆ ಕರೆ ನೀಡಿವೆ.
ವಿವಿಧ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಗಡಿಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ರೈತರನ್ನು ದಿಲ್ಲಿ ಪ್ರವೇಶಿಸದಂತೆ ತಡೆಯಲು ಗಡಿಯಲ್ಲಿ ಬೃಹತ್ ಕ್ರೇನ್, ಕಂಟೈನರ್‌ಗಳನ್ನು ಸಜ್ಜುಗೊಳಿಸಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಅಂಬಾಲಾ, ಕುರುಕ್ಷೇತ್ರ, ಕತಿಹಾಳಾ, ಜಿಂದ್ ಹಿಸಾರ್, ಪತೇಹಾಬದ್, ಸಿರ್ಸಾದಲ್ಲಿ ಫೆಬ್ರವರಿ 13ರಂದು ಇಂಟರ್‌ನೆಟ್, ಮೊಬೈಲ್ ಎಸ್‌ಎಂಎಸ್, ಡಾಂಗಲ್ ಸೇವೆಗೆ ನಿರ್ಬಂಧ ವಿಧಿಸಲಾಗಿದೆ. ಭದ್ರತೆಗೆ ಹರಿಯಾಣ ಪೊಲೀಸರ ಜತೆಗೆ ಕೇಂದ್ರ ಅರೆಸೇನಾ ಪಡೆಯ 50 ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು, ಗಡಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ.