ದಾಖಲೆಯೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್..!
ಸಿಡ್ನಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಮೂಲಕ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಾರ್ನರ್ (57) ತಮ್ಮ ಕೊನೆಯ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು.
ಈ ಅರ್ಧಶತಕದೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ಡೇವಿಡ್ ವಾರ್ನರ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮ್ಯಾಥ್ಯೂ ಹೇಡನ್ ಅವರ ಹೆಸರಿನಲ್ಲಿತ್ತು.
ಆಸ್ಟ್ರೇಲಿಯಾ ತಂಡದ ಮಾಜಿ ಎಡಗೈ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಓಪನರ್ ಆಗಿ ಕಣಕ್ಕಿಳಿದು ಒಟ್ಟು 8625 ರನ್ ಕಲೆಹಾಕಿ ಇತಿಹಾಸ ಬರೆದಿದ್ದರು. ಇದೀಗ ಈ ದಾಖಲೆಯನ್ನು ಡೇವಿಡ್ ವಾರ್ನರ್ ಮುರಿದಿದ್ದಾರೆ.
ಆಸ್ಟ್ರೇಲಿಯಾ ಪರ 203 ಟೆಸ್ಟ್ ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ ಆರಂಭಿಕನ ಸ್ಥಾನದಲ್ಲಿ ಒಟ್ಟು 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಾಗೆಯೇ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡರು. ಆಸೀಸ್ ಪರ ಒಟ್ಟು 463 ಇನಿಂಗ್ಸ್ ಆಡಿರುವ ವಾರ್ನರ್ 18607+ ರನ್ ಕಲೆಹಾಕಿದ್ದಾರೆ.
ಇನ್ನು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್. ಒಟ್ಟು 667 ಇನಿಂಗ್ಸ್ ಆಡಿರುವ ಪಾಂಟಿಂಗ್ 27368 ರನ್ ಕಲೆಹಾಕಿ ದಾಖಲೆ ನಿರ್ಮಿಸಿಟ್ಟಿದ್ದಾರೆ.
ಡೇವಿಡ್ ವಾರ್ನರ್ ಟೆಸ್ಟ್ ವೃತ್ತಿಜೀವನ: ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 112 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 205 ಇನಿಂಗ್ಸ್ ಆಡಿರುವ ಅವರು 3 ದ್ವಿಶತಕ, 26 ಶತಕ ಹಾಗೂ 37 ಅರ್ಧಶತಕಗಳೊಂದಿಗೆ ಒಟ್ಟು 8786 ರನ್ ಕಲೆಹಾಕಿದ್ದಾರೆ. ಇದೀಗ ಸಿಡ್ನಿ ಟೆಸ್ಟ್ ಪಂದ್ಯದ ಮೂಲಕ ಡೇವಿಡ್ ವಾರ್ನರ್ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
AUS vs PAK: ಪಾಕ್ ವೈಟ್ ವಾಶ್: ವಾರ್ನರ್ಗೆ ಗೆಲುವಿನ ವಿದಾಯ
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಡೇವಿಡ್ ವಾರ್ನರ್ (David Warner) ಟೆಸ್ಟ್ ಕ್ರಿಕೆಟ್‌ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.
14 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡದ ಈ ಬಾರಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಜೋಶ್ ಹ್ಯಾಝಲ್ವುಡ್ ಹಾಗೂ ನಾಥನ್ ಲಿಯಾನ್ ದಾಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಪಾಕ್ ಬ್ಯಾಟರ್ಗಳು 115 ರನ್ಗಳಿಗೆ ಆಲೌಟ್ ಆದರು. ಆಸೀಸ್ ಪರ ಹ್ಯಾಝಲ್ವುಡ್ 4 ವಿಕೆಟ್ ಪಡೆದರೆ, ಲಿಯಾನ್ 3 ವಿಕೆಟ್ ಕಬಳಿಸಿ ಮಿಂಚಿದರು.
ದ್ವಿತೀಯ ಇನಿಂಗ್ಸ್ನಲ್ಲಿ 130 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಭರ್ಜರಿ ಆರಂಭ ಒದಗಿಸಿದರು. ತಮ್ಮ ಕೊನೆಯ ಇನಿಂಗ್ಸ್ನಲ್ಲಿ 57 ರನ್ ಬಾರಿಸಿ ವಾರ್ನರ್ ಔಟ್ ಆದರು. ಮತ್ತೊಂದೆಡೆ ಮಾರ್ನಸ್ ಲಾಬುಶೇನ್ ಅಜೇಯ 62 ರನ್ ಬಾರಿಸುವ ಮೂಲಕ 2 ವಿಕೆಟ್ ನಷ್ಟಕ್ಕೆ 130 ರನ್ಗಳ ಗುರಿ ಮುಟ್ಟಿಸಿದರು. ಈ ಮೂಲಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.