ಸಿಲಿಂಡರ್ ಸ್ಫೋಟ ; 7 ಮಂದಿಗೆ ಗಂಭೀರ ಗಾಯ!

ಬೆಂಗಳೂರು: ಬೆಂಗಳೂರಿನ ಅಂಜನಾಪುರ ಸಮೀಪದ ವೀವರ್ಸ್ ಕಾಲೋನಿಯ ಮಾರುತಿ ಲೇಔಟ್‌ನಲ್ಲಿ ಸಿಲಿಂಡರ್ (Cylinder Blast) ಸ್ಫೋಟಗೊಂಡಿದ್ದು, ಒಂದೇ ಕುಟುಂಬದ ಏಳು ಮಂದಿ ಗಾಯಗೊಂಡಿದ್ದಾರೆ.
ಮಾರ್ಟಿನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಐದು ಮಂದಿ ಬಾಡಿಗೆ ಪಡೆದು ವಾಸವಾಗಿದ್ದರು. ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್(32), ನಾಜಿಯಾ(22) ಹಾಗೂ ಇರ್ಫಾನ್ (21), ಗುಲಾಬ್ (18), ಶಹಜಾದ್ (9) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬುಧವಾರ ಮುಂಜಾನೆ 5:30ರ ಸುಮಾರಿಗೆ ಅಡುಗೆ ಮನೆಯ ಲೈಟ್ ಸ್ವಿಚ್ ಆನ್ ಮಾಡಿದಾಗ ಸ್ಫೋಟಗೊಂಡಿದೆ. ಅಡುಗೆ ಅನಿಲ ಸೋರಿಕೆಯಾಗಿರುವುದು ತಿಳಿಯದೆ ಲೈಟ್ ಆನ್ ಮಾಡಿದ್ದೆ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯೇ ಧ್ವಂಸವಾಗಿದೆ. ಮನೆಯ ಚಾವಣಿಯ ಹಾರಿ ಹೋಗಿದ್ದು ಕಿಟಕಿ, ಬಾಗಿಲು ಸೇರಿ ಕಾರಿಡರ್‌ನ ಕಂಬಿಯೂ ಛಿದ್ರಗೊಂಡಿದೆ. ಮನೆಯೊಳಗಿನ ವಸ್ತುಗಳು ಛಿದ್ರಗೊಂಡ ತೀವ್ರತೆಗೆ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿಯಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಣನಕುಂಟೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಿಲಿಂಡರ್ ಸ್ಫೋಟಕ್ಕೆ ಪಕ್ಕದ ಮನೆ ನಿವಾಸಿ ಈಶ್ವರಮ್ಮ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Family Dispute : ಹೆಂಡ್ತಿ ಮೇಲೆ ಸಂಶಯ; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಿಶಾಚಿ ಪತಿ
ಬೆಂಗಳೂರು: ಅನುಮಾನ ಪಿಶಾಚಿ ಗಂಡನೊಬ್ಬ ಹೆಂಡತಿ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ (Family Dispute) ನಡೆದಿದೆ. ಶ್ರೀನಿವಾಸ್ ಎಂಬಾತ ಪತ್ನಿ ಪುಷ್ಪಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕಳೆದ ನವೆಂಬರ್ 16ರಂದು ನಡೆದಿದ್ದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.
ಶ್ರೀನಿವಾಸ್ ಹಾಗೂ ಪುಷ್ಪಮ್ಮ ಕಳೆದ 18 ವರ್ಷದ ಹಿಂದೆ ಮದುವೆಯಾಗಿದ್ದರು. ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್‌ಗೆ ಪತ್ನಿ ಪುಷ್ಪಳ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಹಿರಿಯರು ಅನೇಕ ಬಾರಿ ರಾಜಿ ಪಂಚಾಯಿತಿ ಮಾಡಿದ್ದರು.
ಆದರೆ ಪತ್ನಿ ಮೇಲಿನ ಅನುಮಾನ ಮಾತ್ರ ಕಡಿಮೆ ಆಗಿರಲಿಲ್ಲ. ನಿತ್ಯವು ಜಗಳ ತೆಗೆದು ಕಿರುಕುಳ ನೀಡುತ್ತಿದ್ದ. ಈ ನಡುವೆ ಕಳೆದ 16ರಂದು ಇದೇ ವಿಷಯಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಸಿಟ್ಟಿಗೆದ್ದ ಶ್ರೀನಿವಾಸ್ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಆಕೆ ಕಿರುಚಾಡುತ್ತಿದ್ದಂತೆ ಗಾಬರಿಯಾದ ಶ್ರೀನಿವಾಸ್ ನೀರು ಸುರಿದಿದ್ದಾನೆ. ಬಳಿಕ ಪುಷ್ಪಮ್ಮಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಪುಷ್ಪಳಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಪಿ ಶ್ರೀನಿವಾಸ್‌ನನ್ನು ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.