ರೇಸ್‌ಕೊರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ CCB ದಾಳಿ

ಬೆಂಗಳೂರು: ಇಲ್ಲಿನ ರೇಸ್‌ಕೋರ್ಸ್ (Race Course) ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಸೂಕ್ತ ದಾಖಲೆಗಳಿಲ್ಲದ 3.47 ಕೋಟಿ ರೂ. ಹಣವನ್ನು ಜಪ್ತಿ ಮಾಡಿರುವ ಘಟನೆ ಬೆಂಗಳೂರು (Bengaluru) ನಗರದಲ್ಲಿ ತಡರಾತ್ರಿ ನಡೆದಿದೆ.
ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್ಟಿ ಕಟ್ಟದೇ ವಂಚನೆ ಮಾಡಿದ ಆರೋಪಗಳ ಮೇಲೆ ರೇಸ್‌ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. ಬುಕ್ಕಿಂಗ್ ಕೌಂಟರ್ಗಳನ್ನ ಲಾಕ್ ಮಾಡಿದ್ದಾರೆ. ಅಲ್ಲದೇ ಕೌಂಟರ್ನಲ್ಲಿನ ಸಿಬ್ಬಂದಿ ಹೊರ ಹೋಗದಂತೆ ತಡೆದು ಪರಿಶೀಲಿಸಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಾಳಿಯನ್ನು ಅಂತ್ಯಗೊಳಿಸಿದ್ದಾರೆ.
ದಾಳಿ ವೇಳೆ ದಾಖಲೆಗಳಿಲ್ಲದ 3.47 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಈ ವೇಳೆ ಸಿಕ್ಕವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸುಮಾರು 60 ಜನರನ್ನ ವಶಕ್ಕೆ ಪಡೆದು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ ನೋಟೀಸ್ ನೀಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಸಿಕ್ಕ ಹಣಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚಿಸಿರುವ ಸಿಸಿಬಿ ಪೊಲೀಸರು, ದಾಖಲೆ ಸಲ್ಲಿಸಲು ವಿಫಲರಾದ್ರೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಾಹಿತಿ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಸತ್ ದಾಳಿ: ಮೈಸೂರಿನ ಮನೋರಂಜನ್ ಸೇರಿ ಐವರಿಗೆ ಮಂಪರು ಪರೀಕ್ಷೆ
ನವದೆಹಲಿ: ಸಂಸತ್ತಿನ ಒಳಗೆ ಹೊಗೆ ಬಾಂಬ್ ಸಿಡಿಸಿ ದಾಳಿ ನಡೆಸಿದ ಪ್ರಕರಣದಲ್ಲಿ(Parliament Security Breach Probe) ಬಂಧಿತರಾಗಿರುವ 6 ಆರೋಪಿಗಳ ಪೈಕಿ ಐವರಿಗೆ ಶುಕ್ರವಾರ ಸುಳ್ಳುಪತ್ತೆ ಪರೀಕ್ಷೆ ಮತ್ತು ಮಂಪರು ಪರೀಕ್ಷೆ (Polygraph, Narco Tests) ನಡೆಸಲಾಗಿದೆ
ಮೈಸೂರಿನ ಡಿ. ಮನೋರಂಜನ್(Manoranjan), ನಾಲ್ವರು ಆರೋಪಿಗಳಾದ ಸಾಗರ್ ಶರ್ಮಾ, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಕುಮಾವತ್ ಅವರಿಗೆ ಗುಜರಾತ್ ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಮನೋರಂಜನ್ ಹಾಗೂ ಸಾಗರ್ ಅವರಿಗೆ ಹೆಚ್ಚುವರಿಯಾಗಿ ಟ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದೆ.
ಈ ಪ್ರಕರಣದ ಏಕೈಕ ಮಹಿಳಾ ಆರೋಪಿಯಾಗಿರುವ ನೀಲಂ ಮಂಪರು ಪರೀಕ್ಷೆಗೆ ತನ್ನ ಒಪ್ಪಿಗೆ ನೀಡದ್ದರಿಂದ ಐವರಿಗೆ ಮಾತ್ರ ಪರೀಕ್ಷೆ ನಡೆಸಲು ದೆಹಲಿ ನ್ಯಾಯಾಲಯ ಆದೇಶಿಸಿತ್ತು.
ಸಂಸತ್ ಮೇಲೆ ದಾಳಿ ನಡೆಸಲು ವರ್ಷದ ಹಿಂದೆಯೇ ಮಾಸ್ಟರ್ ಪ್ಲಾನ್ ನಡೆದಿತ್ತು. ಸರ್ಕಾರದ ವಿರುದ್ಧ ಏನಾದರೂ ದೊಡ್ಡದು ಮಾಡಿ ಎಲ್ಲರ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿಯೇ ಮನೋರಂಜನ್ ಯೋಜನೆ ರೂಪಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿ.13 ರಂದು ಸಾಗರ್ ಶರ್ಮಾ ಮತ್ತು ಮನೋರಂಜನ್ ಸಂಸತ್‌ನ ಒಳಗೆ ಹಳದಿ ಸ್ಮೋಕ್ ಬಾಂಬ್ ಸಿಡಿಸಿದರೆ ಸಂಸತ್ತಿನ ಹೊರಗೆ ನೀಲಂ ಮತ್ತು ಅಮೋಲ್ ಶಿಂಧೆ ಕೆಂಪು ಮತ್ತು ಹಳದಿ ಸ್ಮೋಕ್ ಬಾಂಬ್ ಸಿಡಿಸಿದ್ದರು. ಇನ್ನಿಬ್ಬರು ಆರೋಪಿಗಳಾದ ವಿಶಾಲ್ ಮತ್ತು ಲಲಿತ್ ಝಾ ಗುರ್ಗಾಂವ್ ಮೂಲದವರು. ಲಲಿತ್ ಝಾ ತಮ್ಮ ಮೊಬೈಲ್‌ನಲ್ಲಿ ಘಟನೆಯ ದೃಶ್ಯಾವಳಿಗಳನ್ನು ಸೆರೆಹಿಡಿದು ಮೊಬೈಲ್ ಜೊತೆಗೆ ಅಲ್ಲಿಂದ ಪರಾರಿಯಾಗಿದ್ದ. ಮನೋರಂಜನ್, ಇತರರು ಸಂಸತ್ತಿನ ಒಳಗೆ ಹಾಗೂ ಹೊರಗೆ ಹೊಗೆಬಾಂಬ್ ಸಿಡಿಸಿ, ನಿರುದ್ಯೋಗ ಸಮಸ್ಯೆ, ಸರ್ವಾಧಿಕಾರತ್ವಕ್ಕೆ ಬೇಸತ್ತು ಹೀಗೆ ಮಾಡಿದ್ದಾಗಿ ಹೇಳಿದ್ದರು.