Bulandshahr: ಬಸ್-ಟೆಂಪೋ ನಡುವೆ ಡಿಕ್ಕಿ, 10 ಮಂದಿ ಸಾವು
Bulandshahr: ಭಾನುವಾರ ಉತ್ತರ ಪ್ರದೇಶದ ಬುಲಂದ್ಶಹರ್ನ (Bulandshahr) ಸೇಲಂಪುರ ಪ್ರದೇಶದಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಪಿಕಪ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಮೃತಪಟ್ಟು 27 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಡೌನ್-ಮೀರತ್ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. “ಅಪಘಾತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ” ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಅಪಘಾತದ ನಂತರ, ಆಕ್ರೋಶಗೊಂಡ ಜನರು ರಸ್ತೆ ತಡೆ ನಡೆಸಿದ್ದರಿಂದ ಸ್ಥಳದಲ್ಲಿ ಬಹಳ ಹೊತ್ತು ಗೊಂದಲ ಉಂಟಾಗಿತ್ತು. ಗ್ರಾಮದ ಬಳಿ ವಾಹನ ಸವಾರರು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಾರೆ ಎಂದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ ಮತ್ತು ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲು ಅವರಿಗೆ ಮತ್ತು ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅವರು ಹೇಳಿದರು.
ಏಸಿ ಬಾಕ್ಸ್ ಬಿದ್ದು, 19ರ ಹರೆಯದ ತರುಣ ಸಾವು
ನವದೆಹಲಿ: ಕಟ್ಟಡದ ಹೊರಗೆ ನಿಂತಿದ್ದ 19 ವರ್ಷದ ತರುಣನೋರ್ವನ ಮೇಲೆ ಕಟ್ಟಡದ ಮೂರನೇ ಪ್ಲೋರ್‌ನಲ್ಲಿ ಫಿಕ್ಸ್ ಮಾಡಲಾಗಿದ್ದ ಏರ್ ಕಂಡೀಷನ್‌ನ ಬಾಕ್ಸ್ ಬಿದ್ದು, ಹುಡುಗ ಸ್ಥಳದಲ್ಲೇ ಪ್ರಾಣಬಿಟ್ಟ ಆಘಾತಕಾರಿ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರೋಲ್ ಬಾಗ್‌ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ಆಘಾತಕಾರಿ ಘಟನೆಯ ದೃಶ್ಯಾವಳಿ ಸೆರೆ ಆಗಿದೆ. ಇಬ್ಬರು ಹುಡುಗರು ಮಾತನಾಡುತ್ತ ನಿಂತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಟ್ಟಡದಿಂದ ಕಳಚಿಕೊಂಡ ಏಸಿ ಬಾಕ್ಸ್ ಸೀದಾ ಬಂದು ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಹುಡುಗನ ಮೇಲೆ ಬಿದ್ದು, ಬಳಿಕ ನೆಲಕ್ಕೆ ಬಿದ್ದಿದೆ. ಎಸಿ ಬಿದ್ದ ರಭಸಕ್ಕೆ ಇಬ್ಬರೂ ಹುಡುಗರು ಕೆಳಗೆ ಬಿದ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಸ್ಕೂಟರ್‌ನಲ್ಲಿ ಕುಳಿತಿದ್ದ ತರುಣ ದಾರುಣವಾಗಿ ಸಾವನ್ನಪ್ಪಿದ್ದಾನೆ. ಆಗಸ್ಟ್ 17 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಮೃತ ಹುಡುಗನ ಸ್ನೇಹಿತನಿಗೂ ಈ ಘಟನೆಯಲ್ಲಿ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ತನ್ನದಲ್ಲದ ತಪ್ಪಿಗೆ ತರುಣನೋರ್ವನ ಪ್ರಾಣ ಹೋಗಿದೆ. ಆದರೆ ಎಸಿ ಪಿಕ್ಸ್ ಮಾಡಿದ ಕಟ್ಟಡದ ಸಿಬ್ಬಂದಿ ಅದನ್ನು ಕಾಲಕಾಲಕ್ಕೆ ತಪಾಸಣೆ ಮಾಡಿ ಗಮನಿಸಿದ್ದಿದ್ದರೆ ಈ ಅನಾಹುತವನ್ನು ತಡೆಯಬಹುದಿತ್ತೇನೋ.
ಕೆಲ ದಿನಗಳ ಹಿಂದೆ ಥಾಣೆಯಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ಕಟ್ಟಡದ 5ನೇ ಮಹಡಿಯಿಂದ ಜಾರಿಬಿದ್ದ ನಾಯಿಯೊಂದು ಸೀದಾ ಬಂದು 4 ವರ್ಷದ ಬಾಲಕಿಯ ಮೇಲೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದಳು. ಥಾಣೆಯ ಮುಂಬ್ರಾ ಪ್ರದೇಶದಲ್ಲಿ ಈ ಘಟನೆ ಆಗಸ್ಟ್ 7 ರಂದು ನಡೆದಿತ್ತು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಬಳಿಕ ಸಾವನ್ನಪ್ಪಿದ್ದಳು. ಒಟ್ಟಿನಲ್ಲಿ ಸಾವು ಯಾವ ರೂಪದಲ್ಲಿ ಹೇಗೆ ಬೇಕಾದರೂ ಬರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
17 ಮಂದಿ ಮೇಲೆ ಬೀದಿ ನಾಯಿ ದಾಳಿ:
ಉತ್ತರಪ್ರದೇಶ: ಬೀದಿ ನಾಯಿಯೊಂದು ಏಕಾಏಕಿ ದಾಳಿ ಮಾಡಿರುವ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಆಶಿಶ್ ಯಾದವ್ ಎಂದು ಗುರುತಿಸಲಾದ ವ್ಯಕ್ತಿ ಗೋರಖ್‌ಪುರದ ತನ್ನ ಮನೆಯ ಹೊರಗೆ ಬೀದಿಯಲ್ಲಿ ನಡೆದುಕೊಂಡು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಬೀದಿನಾಯಿ ದಾಳಿ ಮಾಡಿದೆ. ಘಟನೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಮನೆಯ ಮುಂದಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಆಗಸ್ಟ್ 14 ರಂದು ಈ ಘಟನೆ ನಡೆದುದ್ದು, ಒಬ್ಬ ವ್ಯಕ್ತಿಗೆ ಮಾತ್ರವಲ್ಲದೇ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 17 ಜನರ ಮೇಲೆ ನಾಯಿ ದಾಳಿ ಮಾಡಿದೆ ಎಂದು ವರದಿಯಾಗಿದೆ.
@ajeetkumarAT ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 18ರಂದು ಹಂಚಿಕೊಂಡಿರುವ ಈ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ವೀಕ್ಷಿಸಿದ್ದಾರೆ.