Escientia ಫಾರ್ಮಾ ಕಂಪನಿಯಲ್ಲಿ ಸ್ಫೋಟ: ಏಳು ಮಂದಿ ಸಾವು
ಆಂಧ್ರಪ್ರದೇಶದ: ಆಂಧ್ರಪ್ರದೇಶದ Escientia ಫಾರ್ಮಾ ಕಂಪನಿಯಲ್ಲಿ ಸ್ಫೋಟ ಸಂಭವಿಸಿ ಏಳು ಮಂದಿ ಸಾವು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಫಾರ್ಮಾ ಕಂಪನಿಯೊಂದರಲ್ಲಿ ರಿಯಾಕ್ಟರ್ ಸ್ಫೋಟಗೊಂಡ ಪರಿಣಾಮ ಕನಿಷ್ಠು 7 ಮಂದಿ ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ (Escientia) ಕಂಪನಿಯಲ್ಲಿ ಈ ಸ್ಫೋಟ ಸಂಭವಿಸಿದೆ.
ಗಾಯಾಳುಗಳನ್ನು ಎನ್‌ಟಿಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಘಟನೆ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾರ್ಮಿಕ, ಕೈಗಾರಿಕಾ ಸಚಿವ ವಾಸಮಶೆಟ್ಟಿ ಸುಭಾಷ್ ಅವರು, ”ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿದ್ದಾರೆ ಎಂದರು.
ಕಾರ್ಖಾನೆಯಲ್ಲಿನ ದಟ್ಟ ಹೊಗೆಯಿಂದಾಗಿ, ಇಲ್ಲಿಯವರೆಗೆ ಮೂವರು ಮೃತಪಟ್ಟಿದ್ದಾರೆ. ಸಾವುನೋವುಗಳ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸ್ಫೋಟ ಸಂಭವಿಸಿದ ಸಮಯದಲ್ಲಿ ಸ್ಥಳದಲ್ಲಿದ್ದ ಒಟ್ಟು ಎಷ್ಟು ಸಿಬ್ಬಂದಿ ಇದ್ದರು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕಾರ್ಖಾನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆಯೇ ಅಥವಾ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಸ್ಫೋಟ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಆಟಿಕೆ ಎಂದು ಭಾವಿಸಿ ಹಾವನ್ನು ಕಚ್ಚಿ ಕೊಂದ 1 ವರ್ಷದ ಮಗು
ಬಿಹಾರ: ಒಂದು ವರ್ಷದ ಮಗು ತನ್ನ ಮನೆಯ ಟೆರೇಸ್ ಮೇಲೆ ಆಟವಾಡುತ್ತಿದ್ದ ವೇಳೆ ಬಂದ ಮೂರು ಅಡಿ ಉದ್ದದ ಹಾವನ್ನು ಆಟಿಕೆ ಎಂದು ಭಾವಿಸಿ ಅದನ್ನು ಕಚ್ಚಿ ಕೊಂದ ಘಟನೆ ಬಿಹಾರದ ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ನಡೆದಿದೆ. ಮಗುವಿನ ಕೈಯಲ್ಲಿ ಸತ್ತ ಹಾವನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಆರೋಗ್ಯ ಸ್ಥಿತಿ ಕಂಡು ಅಚ್ಚರಿಗೊಂಡಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಮಗುವಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ಮಗು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಮಗು ಕಚ್ಚಿದ ಕಾರಣ ಹಾವು ಸಾವನ್ನಪ್ಪಿದೆ.
ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಹಾವು ವಿಷಕಾರಿಯಲ್ಲ, ಆದ್ದರಿಂದ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ವೀಡಿಯೋ ತೋರಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ!
ಮುಂಬೈ: ಆರು ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ತಿಂಗಳುಗಟ್ಟಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮಹಾರಾಷ್ಟ್ರದ (Maharashtra) ಅಕೋಲಾ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು 47 ವರ್ಷದ ಪ್ರಮೋದ್ ಸರ್ದಾರ್ ಎಂದು ಗುರುತಿಸಲಾಗಿದೆ.
ಶಿಕ್ಷಕನ ವರ್ತನೆಯ ಬಗ್ಗೆ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಕ್ಕಳ ಕಲ್ಯಾಣ ಕೇಂದ್ರದ(Department of Child Welfare) ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಿ ಘಟನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ಆಧಾರದ ಮೇಲೆ ಶಿಕ್ಷಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಆತನ ವಿರುದ್ಧ ಪ್ರಥಮ ಎಫ್‌ಐಆರ್ ದಾಖಲಿಸಲಾಗಿದೆ.
ಮಾಹಿತಿಗಳ ಪ್ರಕಾರ ಕಳೆದ ನಾಲ್ಕು ತಿಂಗಳಿನಿಂದ ಶಿಕ್ಷಕ ಪ್ರಮೋದ್ ಸರ್ದಾರ್ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದಾನೆ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಮಂಗಳವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿ ಕೆಲ ಬಾಲಕಿಯರೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಗೆ ವಿದ್ಯುತ್ ತಂತಿ ಸ್ಪರ್ಶ; ಓರ್ವ ಸಾವು, ಮತ್ತೋರ್ವ ಗಂಭೀರ
ಕಡಪ: ಸೈಕಲ್ ನಲ್ಲಿ ಬರುತ್ತಿದ್ದ ಮಕ್ಕಳಿಗೆ ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಒಂದು ಮಗು ಸಾವನ್ನಪ್ಪಿ ಮತ್ತೊಂದು ಮಗು ಗಂಭೀರವಾಗಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಕಡಪದ ಅಗಡಿ ಬೀದಿಯಲ್ಲಿ ಈ ಘಟನೆ ಬುಧವಾರ ನಡೆದಿದ್ದು, ಮಧ್ಯಾಹ್ನ ತನ್ವೀರ್ (11) ಮತ್ತು ಆದಂ (10) ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದರು. ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ವಿದ್ಯುತ್ ತಂತಿ ತಗುಲಿದ್ದು ಈ ವೇಳೆ ತನ್ವೀರ್ ಎಂಬ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ವಿದ್ಯಾರ್ಥಿ ಆದಂ ಸ್ಥಿತಿ ಗಂಭೀರವಾಗಿದೆ. ಗಂಭೀರವಾಗಿರುವ ವಿದ್ಯಾರ್ಥಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.
ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಕಡಪ ಶಾಸಕಿ ಮಾಧವಿ ರೆಡ್ಡಿ ಆಸ್ಪತ್ರೆಗೆ ತೆರಳಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಂತೈಸಿದ್ದಾರೆ. ವಿದ್ಯುತ್ ಅಧಿಕಾರಿಗಳ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಸಾವಿಗೆ ಸಚಿವ ನಾರಾ ಲೋಕೇಶ್ ಆಘಾತ ವ್ಯಕ್ತಪಡಿಸಿದ್ದಾರೆ. ಅಂತೆಯೇ ಬಾಲಕನ ಸಾವು ಅತೀವ ನೋವು ತಂದಿದೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂತೆಯೇ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿರುವ ಮತ್ತೋರ್ವ ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದೆ.