ಬಿಜೆಪಿಯಿಂದ ಲೋಕಸಭೆ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ; ಯಾರಿಗೆಲ್ಲಾ ನೇಮಕ?
ಕರ್ನಾಟಕದಲ್ಲಿ (Karnataka) ಲೋಕಸಭಾ ಚುನಾವಣೆ (Loksabha Elections 2024) ರಂಗೇರಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಇಂದು ಉಭಯ ಪಕ್ಷಗಳು ಸಮನ್ವಯ ಸಭೆ ನಡೆಸಿದವು. ಇದರ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ಸ್ಟಾರ್ ಪ್ರಚಾರಕರ (Karnataka BJP star campaigners:) ಪಟ್ಟಿ ಬಿಡುಗಡೆ ಮಾಡಿದೆ. ನರೇಂದ್ರ ಮೋದಿ, ನಡ್ಡಾ ಸೇರಿದಂತೆ ಕೇಂದ್ರ ಸಚಿವರು, ಕರ್ನಾಟಕದ ಮೂವರು ಮಾಜಿ ಸಿಎಂಗಳು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಅಲ್ಲದೇ ಈ ಬಾರಿ ಲೋಕಸಭಾ ಟಿಕೆಟ್ ನೀಡದೇ ಕೊಕ್ ನೀಡಲಾಗಿರುವ ನಾಯಕರುಗಳನ್ನು ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಲಾಗಿದೆ.
ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಇಂತಿದೆ
ನರೇಂದ್ರ ಮೋದಿ, ಜಗತ್ ಪ್ರಕಾಶ್ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಎಸ್.ಜೈಶಂಕರ್, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಆರ್.ಅಶೋಕ್, ಕೆ.ಅಣ್ಣಾಮಲೈ, ರಾಧಾಮೋಹನ ದಾಸ್ ಅಗರ್ವಾಲ್, ಯೋಗಿ ಆದಿತ್ಯನಾಥ್, ಹಿಮಂತ್ ಬಿಸ್ವಾ ಶರ್ಮಾ, ಪ್ರಮೋದ್ ಸಾವಂತ್, ಫಡ್ನವಿಸ್, ಬಸವರಾಜ ಬೊಮ್ಮಾಯಿ, ಸುಧಾಕರ ರೆಡ್ಡಿ, ಸದಾನಂದಗೌಡ, ಜಗದೀಶ್ ಶೆಟ್ಟರ್, ನಳಿನ್ ಕುಮಾರ್ ಕಟೀಲು, ಸಿ.ಟಿ.ರವಿ, ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲು, ಅರವಿಂದ ಲಿಂಬಾವಳಿ, ವಿ.ಸುನೀಲ್ ಕುಮಾರ್, ಜಿ.ವಿ.ರಾಜೇಶ್, ಪಿ.ರಾಜೀವ್, ಪ್ರೀತಂಗೌಡ, ಬಸನಗೌಡ ಪಾಟೀಲ್ ಯತ್ನಾಳ್, ಭೈರತಿ ಬಸವರಾಜ್, ಪ್ರಮೋದ್ ಮಧ್ವರಾಜ್, ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ, ಎನ್.ಮಹೇಶ್ಗೆ ಸ್ಟಾರ್ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಟಿಕೆಟ್ ಕೈತಪ್ಪಿದವರಿಗೆ ಮಣೆ
ಈ ಬಾರಿ ಹಲವು ಹಾಲಿ ಸಂಸದರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಇದರಿಂದ ಕೆಲ ಸಂಸದರು ಅಸಮಾಧಾನಗೊಂಡಿದ್ದಾರೆ. ಇನ್ನೂ ಕೆಲವರು ಟಿಕೆಟ್ ಕೈತಪ್ಪಿದ ಬೇಸರಲ್ಲಿ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ. ಹೀಗಾಗಿ ಅಂತವರಿಗೆ ಬಿಜೆಪಿ ಸ್ಟಾರ್ ಪ್ರಚಾರಕರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಅತೃಪ್ತರನ್ನು ಮನವೊಲಿಸು ಪ್ರಯತ್ನ ಮಾಡಿದೆ.
ಟಿಕೆಟ್ ವಂಚಿತ ಹಾಲಿ ಸಂಸದರ ಪೈಕಿ ಡಿ.ವಿ. ಸದಾನಂದ ಗೌಡ, ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್ ಮತ್ತು ಎ. ನಾರಾಯಣಸ್ವಾಮಿಗೆ ಅವಕಾಶ ನೀಡಲಾಗಿದೆ. ಮುಖ್ಯವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸ್ಟಾರ್ ಪ್ರಚಾರಕನ್ನಾಗಿ ನೇಮಕ ಮಾಡಿದ್ದು ಅಚ್ಚರಿಕೆ ಕಾರಣವಾಗಿದೆ. ಇನ್ನು ಮೈಸೂರು ಅಭ್ಯರ್ಥಿ ಯದುವೀರ ಒಡೆಯರ್, ಮಂಡ್ಯ ಸಂಸದೆ ಸುಮಲತಾ ಮತ್ತು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇಲ್ಲ.
ಮಂಡ್ಯದಲ್ಲಿಯೇ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ: ವಿಜಯೇಂದ್ರ ಭೇಟಿ ಬಳಿಕ ಸುಮಲತಾ ಅಂಬರೀಶ್
ಬೆಂಗಳೂರು: ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿ ಟಿಕೆಟ್ ವಂಚಿತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಮನವೊಲಿಕೆ ಕಾರ್ಯ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಜೆಪಿ ನಗರದಲ್ಲಿರುವ ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸುವ ಮೂಲಕ ಅವರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನಾಳೆ ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ತಮ್ಮ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದೇನೆ. ವಿಜಯೇಂದ್ರ ತಮ್ಮ ಅಭಿಪ್ರಾಯ ಮತ್ತು ನಿರೀಕ್ಷೆಗಳನ್ನು ವ್ಯಕ್ತಪಡಿಸಿದರು. ನನಗೂ ಜಿಲ್ಲೆ ಮತ್ತು ಚುನಾವಣೆಯ ಬಗ್ಗೆ ಇರುವ ಕಾಳಜಿಯನ್ನು ಹೇಳಿದ್ದೇನೆ. ನಾನು ಬಿಜೆಪಿಯಲ್ಲೇ ಇರಬೇಕೆಂದು ಬಯಸಿದ್ದರಿಂದ ಪಕ್ಷ ಸೇರುವಂತೆ ಕೇಳಿಕೊಂಡರು. ನನ್ನ ಬೆಂಬಲಿಗರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅವರ ನಿರೀಕ್ಷೆ ಮತ್ತು ಅಭಿಪ್ರಾಯಗಳನ್ನು ಆಲಿಸುವುದು ನನ್ನ ಕರ್ತವ್ಯ. ಮಂಡ್ಯದಲ್ಲಿಯೇ ನನ್ನ ನಿಲುವು ಸ್ಪಷ್ಟಪಡಿಸುತ್ತೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.