ಮಹಿಳಾ ಐಪಿಎಸ್ ಅಧಿಕಾರಿ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರ ; ಸಾರ್ವಜನಿಕವಾಗಿ ನಿಂದಿಸಿ ಬೆದರಿಕೆ..!
ಬೆಂಗಳೂರು: ಮಹಿಳಾ ಐಪಿಎಸ್ ಅಧಿಕಾರಿ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್ ಸವಾರ ನಂತರ ಅವರನ್ನು ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ತುಮಕೂರು ಮುಖ್ಯರಸ್ತೆ ಗೊರಗುಂಟೆ ಪಾಳ್ಯ ದಲ್ಲಿ ನಡೆದಿದೆ.
ಆರೋಪಿ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ಐಪಿಎಸ್ ಅಧಿಕಾರಿ ಶೋಭಾರಾಣಿ ಅವರ ಸರ್ಕಾರಿ ವಾಹನಕ್ಕೆ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿ, ಆಗಿರುವ ಡ್ಯಾಮೇಜ್ ಪರಿಶೀಲಿಸಲು ಅಧಿಕಾರಿ ಚಾಲಕನಿಗೆ ಹೇಳಿದರು.
ಈ ವೇಳೆ ಆರೋಪಿಗಳು ಅಧಿಕಾರಿಯ ಚಾಲಕನ ಮೇಲೆ ಕೂಗಾಡಲು ಪ್ರಾರಂಭಿಸಿದರು. ವಾಹನದಲ್ಲಿದ್ದ ಅಧಿಕಾರಿ ಕೆಳಗಿಳಿದು ತಮ್ಮ ಚಾಲಕನ ರಕ್ಷಣೆಗೆ ಬಂದಿದ್ದಾರೆ. ಆರೋಪಿಗಳು ಅಧಿಕಾರಿಯನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿ ಬೆದರಿಕೆ ಹಾಕಿದ್ದಾರೆ.
ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು, ಆದರೆ ಅವರನ್ನೂ ಸವಾರ ನಿಂದಿಸಿದ್ದಾನೆ. ನಂತರ ಆರೋಪಿಯನ್ನು ಬೈಕ್ ಸಮೇತ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ಕರೆತರಲಾಯಿತು. ಐಪಿಎಸ್ ಅಧಿಕಾರಿ ಶೋಭಾರಾಣಿ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಅಧಿಕಾರಿ ಡಾ ವಿಜೆ ಶೋಭಾ ರಾಣಿ ಅವರು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುಧವಾರ ಬೆಳಗ್ಗೆ 10.30ರಿಂದ 11ರ ನಡುವೆ ಈ ಘಟನೆ ನಡೆದಿದೆ. ಚಿಕ್ಕಬಾಣಾವರದ ಸಪ್ತಗಿರಿ ಲೇಔಟ್ ನಿವಾಸಿ ಜಿ ಅಭಿಷೇಕ್ (22) ವಿರುದ್ಧ ದೂರು ದಾಖಲಾಗಿದೆ.
ಅಧಿಕಾರಿ ತನ್ನ ಮನೆಯಿಂದ ಸರ್ಕಾರಿ ಎಸ್‌ಯುವಿಯಲ್ಲಿ ತನ್ನ ಕಚೇರಿಗೆ ಹೋಗುತ್ತಿದ್ದರು. ಹಿಂದಿನಿಂದ ಬಂದ ಯುವಕ ಅವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಆತ ತಾನು ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಮಗನೆಂದು ಹೇಳಿಕೊಂಡು ಅಧಿಕಾರಿಗೆ ಬೆದರಿಕೆ ಹಾಕಿ ನಿಂದಿಸಿದ್ದಾನೆ, ತಮ್ಮ ತಂದೆ ಪ್ರಭಾವಿಯಾಗಿದ್ದು ಹಲವು ಪ್ರಭಾವಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದ್ದಾನೆ.
ಆರೋಪಿಯನ್ನು ಬಂಧಿಸಿದ ನಂತರ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನಂತರ ಕೋರ್ಟ್ ಆತನಿಗೆ ಜಾಮೀನು ನೀಡಿದೆ ಎಂದು ತನಿಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.