ಬೆಂಗಳೂರು : ಮುಂಬೈನಿಂದ ಬಂದಿದ್ದ ರೈಲಿನಲ್ಲಿ ಅಗ್ನಿ ಅವಘಡ ; ತಪ್ಪಿದ ಭಾರಿ ಅನಾಹುತ!
ಬೆಂಗಳೂರು: ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿರುವ ಬೆಂಗಳೂರು ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ರೈಲು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಆಘಾತಕಾರಿ ಘಟನೆ ಇಂದು ಮುಂಜಾನೆ ನಡೆದಿದೆ.
ಮುಂಬೈನಿಂದ ಬಂದಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಎರಡು ಸ್ಲೀಪರ್ ಕೋಚ್ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮುಂಬೈನಿಂದ ಬಂದಿದ್ದ ರೈಲು ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿಲುಗಡೆಯಾದ ಬಳಿಕ ಅಗ್ನಿ ಅವಘಡ ಸಂಭವಿಸಿದೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ ತಕ್ಷಣ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದರಿಂದ ಆಗಬಹುದಾದ ದೊಡ್ಡ ಅವಘಡ ಚಿಕ್ಕದರಲ್ಲೇ ಮುಗಿದುಹೋಗಿದೆ.
ಮುಂಬೈನಿಂದ ಬಂದಿದ್ದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಗಮಿಸಿದ್ದ ಪ್ರಯಾಣಿಕರು ಇಳಿದು ಹೋದ ಬಳಿಕ ನಡೆದ ಈ ಅಗ್ನಿ ಅವಘಡ ಸಂಭವಿಸಿದ್ದು, ಹೀಗಾಗಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿ ಅವಘಡದ ಭೀಕರತೆಗೆ ಮೆಜೆಸ್ಟಿಕ್ ಏರಿಯಾದ ಸುತ್ತ ದಟ್ಟ ಹೊಗೆ ಆವರಿಸಿದ್ದು, ಅಕ್ಕಪಕ್ಕದಲ್ಲಿದ್ದ ಜನರು ಏನಾಗುತ್ತಿದೆ ಅನ್ನೋ ವಿಷಯ ತಿಳಿಯದೆ ಆಘಾತಗೊಂಡ ಪ್ರಸಂಗವೂ ನಡೆಯಿತು.
ಅಗ್ನಿ ಅವಘಡ ಸಂಭವಿಸಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ನಂತರ ಬೆಂಕಿಗೆ ಗುರಿಯಾಗಿದ್ದ ಎರಡು ಬೋಗಿಗಳನ್ನ ಅಧಿಕಾರಿಗಳು ರೈಲಿನಿಂದ ಪ್ರತ್ಯೇಕಗೊಳಿಸಿದರು. ಈ ರೈಲು ಬೆಳಗ್ಗೆ 6.30 ಕ್ಕೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಆಗಮಿಸಿತ್ತು. ಎಂಜಿನ್‌ನಿಂದ ಐದನೇ ಬೋಗಿಯಲ್ಲಿ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಎಸ್ಆರ್ ರೈಲು ನಿಲ್ದಾಣದ ಮೂರನೇ ಪ್ಲಾಟ್ ಫಾರಂ ನಲ್ಲಿ ಸಂಭವಿಸಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿದ್ದು, ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.