ಬ್ಯಾರಿಕೇಡ್ ಆಚೆ ನಿಂತು ಕೈಬೀಸಿದ ಬಿಜೆಪಿ ರಾಜ್ಯಾಧ್ಯಕ್ಷರ ಫೋಟೋ ವೈರಲ್! ಹುಟ್ಟು ಹಾಕಿದ ಚರ್ಚೆ..!

ಬೆಂಗಳೂರು: ಚಂದ್ರಯಾನ 3 ಯಶಸ್ಸಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಿದ್ದರು. ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಭೇಟಿಗೆ ಬಿಜೆಪಿ ನಾಯಕರಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹೊರಗಡೆ ಸಾರ್ವಜನಿಕರಂತೆ ನಿಂತು ಮೋದಿಗೆ ಕೈಬೀಸಿದ ಫೋಟೋವೊಂದು ವೈರಲ್ ಆಗುತ್ತಿದೆ.
ಫೋಟೋದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಮುನಿರತ್ನ, ಕೆ. ಗೋಪಾಲಯ್ಯ , ಆರ್ ಅಶೋಕ್ ಕಾಣಿಸಿಕೊಂಡಿದ್ದಾರೆ. ನಾಲ್ವರು ಮುಖಂಡರು ಬ್ಯಾರಿಕೇಡ್ ಆಚೆ ನಿಂತು ಪ್ರಧಾನಿ ಮೋದಿಗೆ ಕೈ ಬೀಸಿದ್ದಾರೆ. ಅದರಲ್ಲೂ ಮುನಿರತ್ನ ಬ್ಯಾರಿಕೇಡ್ ಮೇಲೆ ಹೆಜ್ಜೆ ಇಟ್ಟು ಪ್ರಧಾನಿಗೆ ಕೈ ಬೀಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಸ್ರೋ ಭೇಟಿಯ ಹಿನ್ನೆಲೆಯಲ್ಲಿ ಪಿಎಂ ಕಚೇರಿ ಸೂಚನೆಯಂತೆ ಯಾವುದೇ ರಾಜಕೀಯ ಪ್ರತಿನಿಧಿಗಳು ಸ್ವಾಗತಕ್ಕೆ ತೆರಳಿರಲಿಲ್ಲ. ಅಷ್ಟೇ ಅಲ್ಲದೆ ಸ್ವತಃ ಬಿಜೆಪಿ ನಾಯಕರೂ ಕೂಡಾ ಅಲ್ಲಿ ಕಾಣಿಸಿಕೊಂಡಿರಲಿಲ್ಲ.
ಹೀಗಿದ್ದರೂ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗಡೆ ಮೋದಿಗೆ ಭರ್ಜರಿ ಸ್ವಾಗತ ಕೋರಲು ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಂಡಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಅಲ್ಲಿ ನೆರೆದಿದ್ದರು. ಪಕ್ಷದ ಕಾರ್ಯಕರ್ತರ ಜೊತೆಯಲ್ಲೇ ಬಿಜೆಪಿ ನಾಯಕರು ನಿಂತು ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು.
ರಾಜ್ಯದಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನ ಹಾಗೂ ಪ್ರತಿಪಕ್ಷದ ನಾಯಕರ ಆಯ್ಕೆ ಆಗದ ಇರುವ ಹಿನ್ನೆಲೆಯಲ್ಲಿ ಮೋದಿ ಭೇಟಿಗೆ ಬಿಜೆಪಿ ನಾಯಕರಿಗೆ ಅವಕಾಶ ಸಿಗದೆ ಇರುವುದು ಮಹತ್ವ ಪಡೆದುಕೊಂಡಿದೆ.
ರಮೇಶ್ ಬಾಬು ಟೀಕೆ
ಇನ್ನು ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ಸಿಗದೆ ಇರುವುದು ಚರ್ಚೆಯನ್ನು ಹುಟ್ಟುಹಾಕಿಸಿದೆ. ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಟ್ವೀಟ್ ಮೂಲಕ ಟೀಕೆ ವ್ಯಕ್ತಪಡಿಸಿದ್ದಾರೆ.
ಇಂತಹ ಪರಿಸ್ಥಿತಿ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಕಾಣಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಸ್ಥಿತಿ ನಾಯಿಪಾಡಾಗಿದೆ. ಬಿಜೆಪಿಯಲ್ಲಿ ಸ್ವಾಭಿಮಾನ, ಆತ್ಮಗೌರವ ಎಂಬುದೇ ಮಾಯವಾಗಿದೆ ಎಂದು ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ. ಅಲ್ಲದೆ ಜೈ ಮೋದಿ ಎಂಬ ಒಕ್ಕಣೆಯನ್ನು ಸೇರಿಸಿದ್ದಾರೆ.
ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ! ಮೋದಿ ಸ್ವಾಗತ ಫೋಟೋಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಟೀಕೆ
ಬೆಂಗಳೂರು: ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ನಿಂತು ಬಿಜೆಪಿ ನಾಯಕರು ಸ್ವಾಗತ ಮಾಡಿದ ಫೋಟೋಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಟೀಕೆ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ರಾಜಕೀಯವಾಗಿ, ಸೈದ್ದಂತಿಕವಾಗಿ ವಿರೋಧಿಗಳಾಗಿದ್ದರೂ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ! ಪ್ರಧಾನಿ ಮುಂದೆ ಬ್ಯಾರಿಕೆಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ ಎಂದಿದ್ದಾರೆ.
ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ “ವಿರೋಧ ಪಕ್ಷದ ನಾಯಕ”ನ ಆಯ್ಕೆ ಸಾಧ್ಯವಾಗುವುದೇ? “ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ” ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಲ್ಲ, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಅವರು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಇನ್ನು ಕರ್ನಾಟಕ ಕಾಂಗ್ರೆಸ್ ಕೂಡಾ ಇದೇ ವಿಚಾರವನ್ನು ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕರದ್ದು ಎಂತಹಾ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಪ್ರಶ್ನಿಸಿದೆ.
ಇನ್ನು ಬಿಜೆಪಿ ನಾಯಕರ ಫೋಟೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದು, ಬಿಜೆಪಿ ನಾಯಕರಿಗೆ ಈ ಸ್ಥಿತಿ ಬರಬಾರದಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋಲಿನ ಹಿನ್ನಲೆಯಲ್ಲಿ ಈ ಸ್ಥಿತಿ ಬಂದಿದೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಫೋಟೋ ಬಗ್ಗೆ ಇಷ್ಟೆಲ್ಲಾ ಕಾಮೆಂಟ್‌ಗಳು ಬರುತ್ತಿದ್ದರೂ ಬಿಜೆಪಿಯ ನಾಯಕರು ಈವರೆಗೆ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ 3 ಯಶಸ್ಸು ಹಿನ್ನೆಲೆಯಲ್ಲಿ ಬೆಂಗಳೂರಿನ ಇಸ್ರೋಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಭರ್ಜರಿ ಸ್ವಾಗತವನ್ನು ಆಯೋಜನೆ ಮಾಡಿತ್ತು. ಆದರೆ ಬಿಜೆಪಿ ನಾಯಕರಿಗೆ ಪ್ರಧಾನಿಯನ್ನು ಭೇಟಿ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಪ್ರಧಾನಿ ಮೋದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಮುನಿರತ್ನ, ಆರ್ ಅಶೋಕ್, ಕೆ ಗೋಪಾಲಯ್ಯ ಕೈ ಬೀಸಿದ್ದರು.