ಬ್ಯಾಂಕ್ ನೌಕರರ ಮುಷ್ಕರ ; ಡಿಸೆಂಬರ್ 4 ರಿಂದ ಬ್ಯಾಂಕ್ ಬಂದ್...!
ಹೊಸದಿಲ್ಲಿ: ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (AIBEA) ಡಿಸೆಂಬರ್ 4ರಿಂದ ರಾಷ್ಟ್ರವ್ಯಾಪಿ ಮುಷ್ಕರಗಳ ಸರಣಿಯನ್ನು (Bank Employees Strike) ಘೋಷಿಸಿದೆ. ಮುಷ್ಕರದ ದಿನಾಂಕಗಳು ಜನವರಿ 20ರವರೆಗೆ ವಿಸ್ತರಿಸಿದೆ. ಈ ಮುಷ್ಕರಗಳು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೂ ವಿಸ್ತರಿಸಿದ್ದು, ರಾಷ್ಟ್ರವ್ಯಾಪಿ ಹಲವಾರು ಬ್ಯಾಂಕ್‌ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.
ಸಂಘಟನೆಯ ಅಧಿಸೂಚನೆಯ ಪ್ರಕಾರ, ಡಿಸೆಂಬರ್‌ನಲ್ಲಿ ಆರು ದಿನ ಹಾಗೂ ಜನವರಿಯಲ್ಲಿ ಏಳು ದಿನಗಳ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಆ ಮುಷ್ಕರದ ದಿನಾಂಕಗಳಂದು ವಿವಿಧ ಬ್ಯಾಂಕ್‌ಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಆಗಲಿದೆ. ನಿಮ್ಮ ಖಾತೆಯಿರುವ ಬ್ಯಾಂಕ್‌ನ ಸಿಬ್ಬಂದಿ ಯಾವಾಗ ಮುಷ್ಕರ ಮಾಡಲಿದ್ದಾರೆ ತಿಳಿದುಕೊಳ್ಳಿ.
ಡಿಸೆಂಬರ್
ಡಿಸೆಂಬರ್ 4ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಪಂಜಾಬ್ & ಸಿಂಧ್ ಬ್ಯಾಂಕ್‌ಗಳ ಸಿಬ್ಬಂದಿ ಮುಷ್ಕರ ಹೂಡಲಿದ್ದಾರೆ. ಡಿಸೆಂಬರ್ 5ರಂದು ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 6ರಂದು ಕೆನರಾ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಡಿಸೆಂಬರ್ 7ರಂದು ಇಂಡಿಯನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್, ಡಿಸೆಂಬರ್ 8ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ, ಡಿಸೆಂಬರ್ 11ರಂದು ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ.
ಜನವರಿ
ಜನವರಿ 2ರಂದು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪುದುಚೇರಿ, ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಜನವರಿ 3 ಗುಜರಾತ್, ಮಹಾರಾಷ್ಟ್ರ, ಗೋವಾ, ದಾದರ್, ದಮನ್ ಮತ್ತು ದಿಯು ಬ್ಯಾಂಕ್ ಮುಷ್ಕರಕ್ಕೆ ಸಾಕ್ಷಿಯಾಗಲಿದೆ. ಜನವರಿ 4ರಂದು ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಎಲ್ಲಾ ಬ್ಯಾಂಕ್‌ಗಳಲ್ಲಿ ಮುಷ್ಕರಗಳು ನಡೆಯಲಿವೆ. ಜನವರಿ 5ರಂದು ದೆಹಲಿ, ಪಂಜಾಬ್, ಹರಿಯಾಣ, ಜಮ್ಮು-ಕಾಶ್ಮೀರ, ಲಡಾಖ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಎಲ್ಲಾ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ. ಜನವರಿ 6ರಂದು ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಅಸ್ಸಾಂ, ತ್ರಿಪುರಾ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಮುಷ್ಕರ ನಡೆಯಲಿದೆ. ಜನವರಿ 19 ಮತ್ತು 20ರಂದು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳ ನೌಕರರು ಮುಷ್ಕರ ನಡೆಸಲಿದ್ದಾರೆ.
ಎಲ್ಲಾ ಬ್ಯಾಂಕ್‌ಗಳಲ್ಲಿ ಸಾಕಷ್ಟು ಸಿಬ್ಬಂದಿ ನೇಮಕಾತಿ ಮಾಡುವುದು, ಬ್ಯಾಂಕಿಂಗ್ ವಲಯದಲ್ಲಿ ಕಾಯಂ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವಿಕೆ ನಿಲ್ಲಿಸುವುದು ಮುಷ್ಕರದ ಬೇಡಿಕೆಗಳಾಗಿವೆ. ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಅವರು, ಕೆಲವು ಬ್ಯಾಂಕ್‌ಗಳಿಂದ ಉದ್ಯೋಗಗಳ ಹೊರಗುತ್ತಿಗೆ ನೀಡುವ ಕ್ರಮ ಗ್ರಾಹಕರ ಗೌಪ್ಯತೆ ಮತ್ತು ಹಣಕಾಸು ನಿಧಿಗೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಕೆಳ ಹಂತಗಳಲ್ಲಿ ನೇಮಕಾತಿಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಒತ್ತಿಹೇಳಿದ್ದಾರೆ.
ಕೆಲವು ಬ್ಯಾಂಕ್‌ಗಳು ಕೈಗಾರಿಕಾ ವಿವಾದಗಳ (ತಿದ್ದುಪಡಿ) ಕಾಯಿದೆಯನ್ನು ಉಲ್ಲಂಘಿಸುತ್ತಿವೆ. ಕಾರ್ಮಿಕ ಅಧಿಕಾರಿಗಳ ಹಸ್ತಕ್ಷೇಪದ ಹೊರತಾಗಿಯೂ ಕೈಗಾರಿಕಾ ವಿವಾದಗಳ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಮತ್ತು ಉದ್ಯೋಗಿಗಳ ಮೇಲೆ ಅನೈಚ್ಛಿಕ ವರ್ಗಾವಣೆಯನ್ನು ಹೇರಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.