Bangalore: ತಡರಾತ್ರಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ; ಆರೋಪಿ ಪತ್ತೆಗೆ ತಂಡ ರಚನೆ!
Bangalore: ಬೆಂಗಳೂರಿನಲ್ಲಿ (Bangalore) ಶನಿವಾರ ತಡರಾತ್ರಿ ಯುವತಿ ಮೇಲೆ ಆಟೋಚಾಲಕ ಹಾಗೂ ಗ್ಯಾಂಗ್‌ನಿಂದ ಅತ್ಯಾಚಾರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಯುವತಿ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ. ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು (Bangalore) ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು, ಈ ಘಟನೆ ನಿನ್ನೆ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ. ಸಂತ್ರಸ್ತ ಯುವತಿ ಮಹಾರಾಷ್ಟ್ರ ಮೂಲದವಳಾಗಿದ್ದು, ಆನೇಕಲ್ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ನಿನ್ನೆ ಸ್ನೇಹಿತನ ಜೊತೆಗೆ ಕೋರಮಂಗಲದ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಪಾರ್ಟಿಗೆ ಹೋಗಿದ್ದಾಳೆ. ನಂತರ ರಾತ್ರಿ ವೇಳೆ ವಾಪಸ್ ರೂಮಿಗೆ ಹೋಗುವಾಗ ಯುವತಿ ಸ್ನೇಹಿತನ ಕಾರನ್ನ ತಾನೇ ಓಡಿಸೋದಾಗಿ ಹೇಳಿ ಕಾರು ಚಾಲನೆ ಮಾಡಿದ್ದಾಳೆ. ಆದರೆ, ಕಾರನ್ನು ಸರಿಯಾಗಿ ಓಡಿಸಲು ಬರದೇ ಮೂರು ಆಟೋಗಳಿಗೆ ಟಚ್ ಮಾಡಿದ್ದಾಳೆ. ಆಟೋ ಚಾಲಕರು ಯುವತಿ ಮೇಲೆ ಗಲಾಟೆ ಮಾಡಲು ಮುಂದಾಗುದ್ದಾರೆ. ಆಗ ಯುವತಿ ಭಯದಿಂದ ಪೊಲೀಸರ ಸಹಾಯವಾಣಿ 112ಗೆ ಕರೆ ಮಾಡಿದ್ದಾಳೆ ಎಂದು ತಿಳಿಸಿದರು.
ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ತನ್ನನ್ನು ವಶಕ್ಕೆ ಪಡೆಯಬಹುದು ಎಂಬ ಭಯದಿಂದ ಯುವತಿ ಅಲ್ಲಿಂದ ತನ್ನ ರೂಮಿಗೆ ಹೋಗಲು ತಡರಾತ್ರಿ ವೇಳೆ ಅಪರಿಚಿತ ಬೈಕ್ ಸವಾರರಿಗೆ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾಳೆ. ಆಗ ಒಬ್ಬ ಬೈಕ್ ಸವಾರ ನಾನು ಆಕಡೆಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಅದೇ ಮಾರ್ಗದಲ್ಲಿ ಮತ್ತೊಬ್ಬ ಬೈಕ್ ಸವಾರ ಬಂದಾಗ ಆತನನ್ನು ಗೋಗರೆದು ತನ್ನನ್ನು ಡ್ರಾಪ್ ಮಾಡುವಂತೆ ಕೇಳಿದ್ದಾಳೆ. ಆಗ ಬೈಕ್‌ನವನು ಡ್ರಾಪ್ ಮಾಡಲು ಒಪ್ಪಿಕೊಳ್ಳುತ್ತಿದ್ದಂತೆ ಸ್ನೇಹಿತನನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾಳೆ ಎಂದು ಮಾಹಿತಿ ನೀಡಿದರು.
ಪೊಲೀಸರ ವಾಹನ ಶೆಡ್ ಬಳಿಗೆ ಹೋಗುತ್ತಿದ್ದಂತೆ ಬೈಕ್‌ನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ಅಲ್ಲಿಂದ ಪರಾರಿ ಆಗಿದ್ದಾನೆ. ಆದರೆ, ಇದಕ್ಕೂ ಮೊದಲೇ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ವಿರೋಧ ಮಾಡಿದಾಗ ಆಕೆಯನ್ನು ಥಳಿಸಿ, ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿದ್ದಾನೆ. ಪೊಲೀಸರು ಯುವತಿಯನ್ನು ನೋಡಿದಾಗ ಹರಿದ ಬಟ್ಟೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದಳು. ನಂತರ ಅಲ್ಲಿಯೇ ಪಕ್ಕದ ಗೂಡ್ಸ್ ವಾಹನವೊಂದರಲ್ಲಿದ್ದ ಟಾರ್ಪಲ್ ಸುತ್ತಿಕೊಂಡು ಯುವತಿಯನ್ನು ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದರು.
ಈ ಘಟನೆಯಲ್ಲಿ ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ಆಗಿರುವುದು ಖಚಿತವಾಗಿದೆ. ಆದರೆ, ಅತ್ಯಾಚಾರ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದ್ದು, ವರದಿ ಬಂದ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದರು.
ಗೃಹಸಚಿವರು ಪ್ರತಿಕ್ರಿಯೆ
ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದು, ” ಬೆಂಗಳೂರಿನ (Bangalore) ಎಚ್ಎಸ್‌ಆರ್ ಲೇಔಟ್‌ನಲ್ಲಿ ಅತ್ಯಾಚಾರ ಪ್ರಯತ್ನ ಆಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತ ಯುವತಿಯೇ ದೂರು ನೀಡಿದ್ದಾರೆ. ಈ ಬಗ್ಗೆ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಗ್ಯಾಂಗ್ ರೇಪ್ ಪ್ರಯತ್ನ ನಡೆದಿದರೋದು ನಿಜ. ವೈದ್ಯಕೀಯ ಪರೀಕ್ಷೆ ವರದಿ ಬಂದ ನಂತರವೇ ಈ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಸದ್ಯ ಸಂತ್ರಸ್ತ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ” ಎಂದು ತಿಳಿಸಿದ್ದಾರೆ.
ಕೋಲ್ಕತ್ತಾ ಘಟನೆ ಮಾಸುವ ಮುನ್ನ ಕೃತ್ಯ
ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಕೆಲಸದ ಅವಧಿಯಲ್ಲಿಯೇ ಆಸ್ಪತ್ರೆಯಲ್ಲಿದ್ದಾಗ ಅತ್ಯಾಚಾರ ನಡೆದಿದೆ. ಈ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಬೆನ್ನಲ್ಲೆ ದೇಶದ ಮತ್ತೊಂದು ಮಹಾನಗರವಾದ ಬೆಂಗಳೂರಿನಲ್ಲಿ ಅತ್ಯಾಚಾರ ನಡೆದಿರುವುದು ಇಲ್ಲಿನ ಜನರಲ್ಲಿ ಆತಂಕ ತರಿಸಿದೆ.
ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಚರಂಡಿಗೆ ಎಸೆದು ಕೊಂದ ಯುವಕ
ಮೀರತ್: ಭೀಕರ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಮೀರತ್‌ನಲ್ಲಿ ವ್ಯಕ್ತಿಯೊಬ್ಬ 2 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಬಾಲಕಿಯ ಮನೆಯವರು ಆತನನ್ನು ಹಿಂಬಾಲಿಸಿಕೊಂಡು ಹೋದಾಗ ಆತ ಹೆದರಿಕೊಂಡು ಆ ಮಗುವನ್ನು ಚರಂಡಿಗೆ ಎಸೆದು ಓಡಿಹೋಗಿದ್ದಾನೆ. ತೀವ್ರವಾದ ಗಾಯದಿಂದಾಗಿ ಆ ಬಾಲಕಿ ಮೃತಪಟ್ಟಿದ್ದು, ಆಕೆಯ ಶವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ವಿವರಗಳನ್ನು ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್, ಶುಕ್ರವಾರ ತಡರಾತ್ರಿ 20 ವರ್ಷದ ಮೋಯಿಶ್ ಎಂಬಾತ ಮೀರತ್‌ನ ಸದರ್ ಪ್ರದೇಶದಲ್ಲಿ ಮನೆಯಿಂದ ಹೊರಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಮಲಗಿದ್ದ 2 ವರ್ಷದ ಬಾಲಕಿಯನ್ನು ತನ್ನ ಮನೆಯ ಹೊರಗಿನಿಂದ ಅಪಹರಿಸಿದ ಘಟನೆ ನಡೆದಿದೆ. ಕುಟುಂಬದ ಸದಸ್ಯರು ಎಚ್ಚರಗೊಂಡ ನಂತರ, ತಮ್ಮ ಮನೆಯ ಮಗು ಇಲ್ಲವೆಂದು ಗೊತ್ತಾಗಿದೆ. ತಕ್ಷಣ ಆರೋಪಿಯನ್ನು ಹಿಂಬಾಲಿಸಿ ಹೋಗಿದ್ದಾರೆ. ಆದರೆ, ಆತ ಆ ಬಾಲಕಿಯನ್ನು ಚರಂಡಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಇದರಿಂದ ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಆಯುಷ್ ಸಿಂಗ್ ಹೇಳಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ 2 ಅತ್ಯಾಚಾರ ಪ್ರಕರಣಗಳ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.