Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆ ಆಧಾರಿತ ಕೃಷಿ ಹೆಚ್ಚಾಗಿದ್ದು ತಮ್ಮ ಮೂಲ ಆದಾಯವನ್ನು ಅಡಿಕೆ ಕೃಷಿಯಿಂದಲೇ ಗಳಿಸುತ್ತಾರೆ. ಕರಾವಳಿ, ಮಲೆನಾಡು, ಅರೆಮಲೆನಾಡು ಪ್ರಾಂತ್ಯಕ್ಕೆ ಸೀಮಿತಗೊಂಡಿದ್ದ ಅಡಕೆ ಕೃಷಿ ಕಳೆದೆರಡು ವರ್ಷಗಳಿಂದ ವ್ಯಾಪಕ ಪ್ರಮಾಣದಲ್ಲಿ ವಿಸ್ತರಣೆಗೊಳ್ಳುತ್ತಿದ್ದು, ಅಡಕೆ ಮಾರುಕಟ್ಟೆಯ ಭವಿಷ್ಯ ಮಂಕಾಗಿದೆ.ಅಡಕೆ ಕೃಷಿಗೆ ತಗುಲಿರುವ ಹಳದಿ ರೋಗ ಇಡೀ ಬೆಳೆಯ ಬುಡವನ್ನೇ ಅಲ್ಲಾಡಿಸಿದೆ. ರೋಗದಿಂದ ಉಂಟಾದ ತಲ್ಲಣ, ಬೆಳೆ ವಿಸ್ತರಣೆಯಿಂದ ಉಂಟಾದ ಸಂಚಲನ ಮತ್ತು ಕಳ್ಳ ನುಸುಳುವಿಕೆ ಅವಾಂತರಗಳು ನಿರಂತರವಾಗಿ ಬೆಳೆಯ ಮೇಲೆ ತೂಗುಕತ್ತಿಯಾಗಿ ನೇತಾಡುತ್ತಿದ್ದು, ಅಡಕೆ ಕ್ಷೇತ್ರದ ಹಿತರಕ್ಷಣೆಗಾಗಿ ಸರಕಾರ ಸಮಗ್ರ ನೀತಿ ರೂಪಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಎರಡು ವರ್ಷ ಹಿಂದೆ 500 ರೂ.ಗಳ ಗಡಿ ದಾಟಿ ದಾಖಲೆ ನಿರ್ಮಿಸಿದ್ದ ಮಂಗಳೂರು ಅಡಕೆ ದರ ಇಳಿಮುಖವಾಗಿದ್ದು, ಈಗ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಅಡಕೆ ತೋಟದಲ್ಲಿ 2 ಮತ್ತು 3ನೇ ಕೊಯ್ಲು ಕೂಡ ಮುಗಿಯುತ್ತಾ ಹಾಲಿ ವರ್ಷದ ಬೆಳೆ ಮುಗಿಯುತ್ತಾ ಬರುತ್ತಿದ್ದಂತೆ ಇತ್ತ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಧಾರಣೆ ಇಳಿಯುತ್ತಿರುವುದು ಭವಿಷ್ಯದ ಮೇಲೆ ಕರಾಳತೆ ಮೂಡಿಸಿದೆ.
ಮಂಗಳೂರು ಚಾಲಿ ಹೊಸ ಅಡಕೆ ಕ್ಯಾಂಪ್ಕೋದಲ್ಲಿ ಕೆಜಿಗೆ 320 ರಿಂದ 335 ರೂ. ಆಸುಪಾಸಿನಲ್ಲಿ ಖರೀದಿಯಾಗುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿ ಕೆಲವೆಡೆ 320 ರೂ. ಗಳಿದ್ದರೆ, ಇನ್ನು ಕೆಲವೆಡೆ 330 ರೂ. ಇದೆ. ಹಾಲಿ ಋತುಮಾನದ ಕೊಯ್ಲು ಆರಂಭಗೊಳ್ಳುವಾಗ 370 ರೂ. ಆಸುಪಾಸಿನಲ್ಲಿದ್ದ ಹೊಸ ಅಡಕೆ ಧಾರಣೆ ಈಗ 330 ರೂ.ಗೆ ಬಂದು ನಿಂತಿದೆ. 500 ರೂ.ಗಳ ಗಡಿ ದಾಟಿ ಇತಿಹಾಸ ಸೃಷ್ಟಿಸಿದ್ದ ಹಳೆ ಅಡಕೆ ಈಗ 370ಕ್ಕೆ ಖರೀದಿಯಾಗುತ್ತಿದೆ.
ವಿದೇಶದಿಂದ ಅಡಕೆ ಆಮದು ಪ್ರಕ್ರಿಯೆ ನಿಲ್ಲಿಸಬೇಕೆಂಬ ರೈತರ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲವಾದರೂ, ಕನಿಷ್ಠ ಆಮದು ದರ 350 ರೂ. ಮಿತಿ ನಿಗದಿ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು. ಹೀಗಾಗಿ 350 ರೂ.ಗಿಂತಲೂ ಕಡಿಮೆ ದರದಲ್ಲಿ ಅಡಕೆ ಆಮದಾಗದಂತಹ ಸನ್ನಿವೇಶ ನಿರ್ಮಿಸಲಾಗಿತ್ತು.ಆದರೆ ಆಮದು ಪ್ರಮಾಣ ಹೆಚ್ಚಳ ಮತ್ತು ಕಳ್ಳ ಮಾರ್ಗದಲ್ಲಿ ಅಡಕೆ ಒಳ ನುಸುಳುತ್ತಿರುವುದರಿಂದ ದೇಸೀ ಅಡಕೆ ಮಾರುಕಟ್ಟೆ ಮೇಲೆ ಮಾರಕ ಹೊಡೆತ ಬೀಳುತ್ತಿದೆ ಎಂಬ ಅಭಿಪ್ರಾಯವಿದೆ.
ಅಡಕೆ ಆಮದು ದರ 350 ರೂ. ಎಂದು ಕೇಂದ್ರ ಸರಕಾರ ನಿಗದಿ ಮಾಡಿದ ಮೇಲೆ ಅಧಿಕೃತ ಆಮದು ಪ್ರಮಾಣ ಕಡಿಮೆಯಾಗಿದೆ. ಇಡೀ ವರ್ಷದಲ್ಲಿ 30 ಸಾವಿರ ಟನ್ ಮಾತ್ರ ಅಧಿಕೃತ ಆಮದಾಗಿದೆ. ಆದರೆ ಇದರ ಹಲವು ಪಟ್ಟು ಅನಧಿಕೃತವಾಗಿ ಬರುತ್ತಿದೆ. ತಮಿಳುನಾಡಿನ ಬಂದರುಗಳಿಗೆ ತೈಲ ಬ್ಯಾರೆಲ್‌ಗಳಲ್ಲಿ ಅಡಕೆ ತುಂಬಿಸಿ ಕಳುಹಿಸಲಾಗಿದೆ. ವಿದೇಶದಿಂದ ಕಾನೂನುಬಾಹಿರವಾಗಿ ಅಡಕೆ ಬರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕ್ಯಾಂಪ್ಕೋ ಪತ್ರ ಬರೆದಿದೆ.
ಎರಡು ವರ್ಷ ಹಿಂದೆ 500 ರೂ.ಗಳ ಗಡಿ ದಾಟಿ ದಾಖಲೆ ನಿರ್ಮಿಸಿದ್ದ ಮಂಗಳೂರು ಅಡಕೆ ದರ ಇದೀಗ ಇಳಿಮುಖ. ಆಮದು ಪ್ರಮಾಣ ಹೆಚ್ಚಳ ಮತ್ತು ಕಳ್ಳ ಮಾರ್ಗದಲ್ಲಿ ಅಡಕೆ ಒಳ ನುಸುಳುತ್ತಿರುವುದರಿಂದ ದರ ಕುಸಿತ.
ಇನ್ನು ಕೆಳಗಡೆ ಕಳೆದ ಬಾರಿಯ ಬಿಸಿಲಿಗೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆ ಆಗದೆ ಈ ಬಾರಿ ಹಲವರಿಗೆ ಎರಡೇ ಕೊಯ್ಲಲ್ಲಿ ಆಡಿಕೆ ನಿಂತುಹೋಗಿದೆ. ಪ್ರತಿವರ್ಷ ಮೂರರಿಂದ ನಾಲ್ಕು ಕೊಯ್ಲು ದೊರೆಯುತ್ತಿದ್ದ ಅಡಿಕೆ ಈ ಬಾರಿ ಕೆಲವು ಬೆಳೆಗಾರರಿಗೆ ಎರಡೇ ಕೊಯ್ಲಿಗೆ ನಿಂತಿದೆ. ಇನ್ನು ಪ್ರತಿ ವರ್ಷ ಹೋದಂತೆ ಸಾವಯವ ಹಾಗೂ ರಾಸಾಯನಿಕ ಗೊಬ್ಬರಕ್ಕೆ ದರವು ಜಾಸ್ತಿ ಆಗುತ್ತಿದೆ. ಕೂಲಿ ಕಾರ್ಮಿಕರ ವೇತನವು ವರ್ಷ ಕಳೆದಂತೆ ಜಾಸ್ತಿಯಾದರು ಅಡಿಕೆ ಬೆಳೆಗೆ ನಿಗದಿತ ದರ ದೊರೆಯದಿದ್ದರೆ, ಮುಂದಿನ ದಿನಗಳಲ್ಲಿ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದುರಾಗುವ ದಿನ ದೂರವಿಲ್ಲ.