ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಇಂದು ಕಾಂಗ್ರೆಸ್ ಸೇರಲಿರುವ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್!
ಬೆಂಗಳೂರು, (ಅಕ್ಟೋಬರ್, 20): ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಅವರು ಇಂದು(ಅಕ್ಟೋಬರ್ 20) ಕಾಂಗ್ರೆಸ್(Congress) ಸೇರ್ಪಡೆಯಾಗಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಗುಡ್ಬೈ ಹೇಳಿ ಕೈ ಹಿಡಿಯಲಿದ್ದಾರೆ.
ಕಳೆದ ತಿಂಗಳಷ್ಟೇ ಕೆ.ಆರ್. ಪುರದಲ್ಲಿರುವ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಪಕ್ಷ ಸೇರುವುದಾಗಿ ಡಿಕೆಶಿಗೆ ಪೂರ್ಣಿಮಾ ಭರವಸೆ ಕೊಟ್ಟಿದ್ದರು. ಅದರಂತೆ ಇದೀಗ ಕಾಂಗ್ರೆಸ್ ಸೇರುತ್ತಿದ್ದಾರೆ. ಆದ್ರೆ, ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ ಕಾಡುಗೊಲ್ಲ ಸಮುದಾಯದ ಹಲವರಿಂದ ವಿರೋಧ ವ್ಯಕ್ತವಾಗಿದೆ.
ಕಾಡುಗೊಲ್ಲ ಸಮುದಾಯದ ನಾಯಕರನ್ನು ವಿಶ್ವಾಸಕ್ಕೆ ಪಡೆಯದೇ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ವಿರೋಧ ವ್ಯಕ್ತವಾಗಿವೆ. ಅಲ್ಲದೇ ಪೂರ್ಣಿಮಾ ಶ್ರೀನಿವಾಸ್ ಕಾಡುಗೊಲ್ಲ ವಿರೋಧಿ ಎಂದು ಪೋಸ್ಟ್ ಗಳನ್ನು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಕಾಡುಗೊಲ್ಲ ಸಮುದಾಯದ ನಾಯಕರ ಅಸಮಾಧಾನ ನಡುವೆಯೂ ಪೂರ್ಣಿಮಾ ಕಾಂಗ್ರೆಸ್ ಸೇರುತ್ತಿದ್ದಾರೆ.
ದಂಪತಿಗಳಿಬ್ಬರ ರಾಜಕೀಯಕ್ಕೆ ಸಮುದಾಯ ಬಲಿಯಾಗುತ್ತಿದೆ. ಹಿರಿಯೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವ ಕಾಡುಗೊಲ್ಲ ಸಮುದಾಯ ಕೆ ಪೂರ್ಣಿಮಾ ಶ್ರೀನಿವಾಸ್ ಅವರನ್ನ ಬೆಂಬಲಿಸಿತ್ತು. 2014ರಲ್ಲಿ ಪೂರ್ಣಿಮಾ ತಂದೆ ಎ ಕೃಷ್ಣಪ್ಪ ಅವರು ಕಾಂಗ್ರೆಸ್ ನಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಿದ್ದರು.
ಆದ್ರೆ, ಎ ಕೃಷ್ಣಪ್ಪ ಅವರು ಅಕಾಲಿಕ ಮರಣ ಹೊಂದಿದ ಬಳಿಕ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಸಮುದಾಯದ ಒಗ್ಗಟ್ಟಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾದ ಕೆ ಪೂರ್ಣಿಮಾ 2023ರ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರು. ಸೋತ ಮೂರ್ನಾಲ್ಕು ತಿಂಗಳಲ್ಲೇ ಇದೀಗ ಕಾಂಗ್ರೆಸ್ನತ್ತ ಮುಖಮಾಡಿದ್ದಾರೆ. ದಂಪತಿಗಳಿಬ್ಬರು ರಾಜಕೀಯ ಅಸ್ತಿತ್ವವ ಕಂಡುಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.