ನಟಿ ಕಂಗನಾ ರಣಾವತ್ ಗೆ ಲೋಕಸಭೆ ಚುನಾವಣೆಗೆ ಟಿಕೆಟ್; ವರುಣ್ ಗಾಂಧಿ ಸೇರಿದಂತೆ ಹಲವರಿಗೆ ಮಿಸ್...!
ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯು 5ನೇ ಅಭ್ಯರ್ಥಿಗಳ ಪಟ್ಟಿ (BJP Candidates) ಬಿಡುಗಡೆ ಮಾಡಿದ್ದು, ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸೇರಿ 111 ಜನರಿಗೆ ಟಿಕೆಟ್ ಘೋಷಣೆ ಮಾಡಿದೆ. ಉದ್ಯಮಿ ನವೀನ್ ಜಿಂದಾಲ್, ರಾಮಾಯಣ ಟಿವಿ ಸೀರಿಯಲ್‌ನಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್ (Arun Govil) ಸೇರಿ ಹಲವರಿಗೆ ಬಿಜೆಪಿಯು ಮಣೆ ಹಾಕಿದೆ.
ಕಂಗನಾ ರಣಾವತ್ ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ರಾಮಾಯಣ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದ ಮೂಲಕವೇ ದೇಶಾದ್ಯಂತ ಗಮನ ಸೆಳೆದಿದ್ದ ಅರುಣ್ ಗೋವಿಲ್ ಅವರು ಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಭಾನುವಾರವಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ನವೀನ್ ಜಿಂದಾಲ್ ಅವರು ಹರಿಯಾಣದ ಕುರುಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
My beloved Bharat and Bhartiya Janta’s own party, Bharatiya Janta party ( BJP) has always had my unconditional support, today the national leadership of BJP has announced me as their Loksabha candidate from my birth place Himachal Pradesh, Mandi (constituency) I abide by the high…
— Kangana Ranaut (@KanganaTeam) March 24, 2024
ಬಿಜೆಪಿಯು ಐದನೇ ಪಟ್ಟಿಯಲ್ಲಿ ಕರ್ನಾಟಕ, ಹರಿಯಾಣ, ಗುಜರಾತ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಹೆಸರಿಸಿದೆ. ಬಿಜೆಪಿಯು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೂಡ ನಟರು, ಸೆಲೆಬ್ರಿಟಿಗಳಿಗೆ ಆದ್ಯತೆ ನೀಡಿದೆ.
ಉತ್ತರ ಪ್ರದೇಶದ ಪಿಲಿಭಿಟ್ ಕ್ಷೇತ್ರದಿಂದ ವರುಣ್ ಗಾಂಧಿ (Varun Gandhi) ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಆದರೆ, ವರುಣ್ ಗಾಂಧಿ ಅವರ ತಾಯಿ ಮನೇಕಾ ಗಾಂಧಿ (Maneka Gandhi) ಅವರಿಗೆ ಸುಲ್ತಾನ್‌ಪುರದಿಂದಲೇ ಟಿಕೆಟ್ ನೀಡಲಾಗಿದೆ.
ವರುಣ್ ಗಾಂಧಿ ಅವರು ಪಿಲಿಭಿಟ್ ಕ್ಷೇತ್ರದಿಂದ 2009 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಇವರು 2014ರಲ್ಲಿ ಸುಲ್ತಾನ್‌ಪುರದಿಂದಲೂ ಸ್ಪರ್ಧಿಸಿ ಜಯ ಕಂಡಿದ್ದರು. 2019ರಲ್ಲಿ ಸುಲ್ತಾನ್‌ಪುರದಲ್ಲಿ ವರುಣ್ ಗಾಂಧಿ ಅವರ ತಾಯಿ ಮನೇಕಾ ಗಾಂಧಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಈಗ ಪಿಲಿಭಿಟ್ ಕ್ಷೇತ್ರದಲ್ಲಿ ಬಿಜೆಪಿಯು ವರುಣ್ ಗಾಂಧಿ ಅವರ ಬದಲು ಜಿತಿನ್ ಪ್ರಸಾದ ಅವರಿಗೆ ಟಿಕೆಟ್ ನೀಡಿದೆ. ಇತ್ತೀಚೆಗೆ, ವರುಣ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಟೀಕಿಸಿದ್ದರು.
ಬಿಜೆಪಿಯು ನಾಲ್ಕನೇ ಪಟ್ಟಿಯಲ್ಲಿ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಟಿಕೆಟ್ ನೀಡಿತ್ತು. ಪುದುಚೇರಿಯ ಹಾಗೂ ತಮಿಳುನಾಡಿನ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಬಿಡುಗಡೆ ಮಾಡಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಬಿಡುಗಡೆ ಮಾಡುತ್ತಿರುವ ಎರಡನೇ ಪಟ್ಟಿ ಇದಾಗಿದೆ. ಪುದುಚೇರಿಯಿಂದ ಎ. ನಮಶ್ಶಿವಾಯಂ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಘೋಷಿಸಿದ ಮೊದಲ ಪಟ್ಟಿಯಲ್ಲಿ ಕೊಯಮತ್ತೂರಿನಿಂದ ಕೆ.ಅಣ್ಣಾಮಲೈ, ಚೆನ್ನೈ ದಕ್ಷಿಣದಿಂದ ತಮಿಳಿಸೈ ಸೌಂದರರಾಜನ್ ಮತ್ತು ನೀಲಗಿರಿಯಿಂದ ಎಲ್.ಮುರುಗನ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿತ್ತು.