ಎಲೆಕ್ಷನ್ ಡ್ಯೂಟಿಗೆ ಹೋಗುತ್ತಿದ್ದಾಗ ತಮಿಳುನಾಡಲ್ಲಿ ಅಪಘಾತ; ಪೊಲೀಸ್ ಅಧಿಕಾರಿ ಮೃತ್ಯು.!

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಐವರು ಪೊಲೀಸ್ ಅಧಿಕಾರಿಗಳು ಹೋಗುತ್ತಿದ್ದ ಜೀಪ್ ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಬಸ್‌ಗೆ ಡಿಕ್ಕಿಯಾದ (Road Accident) ಪರಿಣಾಮ ಕರ್ನಾಟಕದ ಅಧಿಕಾರಿ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ.
ಕರ್ನಾಟಕದಿಂದ ಎಲೆಕ್ಷನ್ ಡ್ಯೂಟಿಗೆ ಹೋಗಿದ್ದ ಪೊಲೀಸ್ ಅಧಿಕಾರಿ, ಅಸಿಸ್ಟೆಂಟ್ ಕಮಾಂಡೆಂಟ್ ಪ್ರಭಾಕರ್ ಹಾಗೂ ತಮಿಳುನಾಡು ಕಾನ್ಸ್‌ಟೇಬಲ್ ದಿನೇಶ್ ಮೃತಪಟ್ಟಿದ್ದಾರೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ ಎನ್ನಲಾಗಿದೆ.
ತಿರುವಣ್ಣಾಮಲೈ- ದಿಂಡಿವನಂ ಹೈವೇಯಲ್ಲಿ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಇಬ್ಬರ ಮೃತದೇಹಗಳನ್ನು ತಮಿಳುನಾಡಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕರ್ನಾಟಕ ಪೊಲೀಸರಿಗೆ ಹಸ್ತಾಂತರ ಮಾಡಲಾಗುವುದು. ಮೃತಪಟ್ಟಿರುವ ಬಗ್ಗೆ ಪ್ರಭಾಕರ್ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಕಿಲ್ಪೆನ್ನತುರ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬಸ್ ಮತ್ತು ಜೀಪ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಜೀಪ್ ಛಿದ್ರವಾಗಿದ್ದು, ಬಸ್‌ನ ಮುಂಭಾಗ ಸಹ ದೊಡ್ಡ ಪ್ರಮಾಣದಲ್ಲಿ ಜಖಂ ಆಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹೇಮಂತ್ ಕುಮಾರ್ (ಡೆಪ್ಯೂಟಿ ಕಮಾಂಡರ್), ವಿಟ್ಠಲ್ ಗಡಾದರ್ (ಹೆಡ್ ಕಾನ್ಸ್‌ಟೇಬಲ್), ಜಯಕುಮಾರ್ (ಕಾನ್ಸ್‌ಟೇಬಲ್) ಮೂವರನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈಹುಲ್ಲು ಸಾಗಿಸುವ ಮಿನಿ ಲಾರಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
ಬೆಳ್ತಂಗಡಿ: ಹಾಸನದ ಸಕಲೇಶಪುರದ ಬೈಹುಲ್ಲು ವ್ಯಾಪಾರಸ್ಥರೋರ್ವರು ತನ್ನ ಮಿನಿ ಲಾರಿಯಲ್ಲಿ ಹೈನುಗಾರಿಕೆ ಮಾಡುವ ಕೃಷಿಕರ ಮನೆ ಮನೆಗೆ ಬೈ ಹುಲ್ಲನ್ನು ತರುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಟ್ಟೆಮಾರು ಎಂಬಲ್ಲಿ ಗುರುವಾರ ನಡೆದಿದೆ.
ಬೆಂಕಿ ಹೊತ್ತಿಕೊಳ್ಳುತ್ತಲೇ ಸ್ಥಳೀಯರೊಬ್ಬರು ಬೊಬ್ಬೆ ಹಾಕಿ ಮಾಹಿತಿ ನೀಡಿದರು. ಕೂಡಲೇ ಲಾರಿಯವರು ಸ್ಥಳೀಯ ಕೃಷಿಕ ಪುರಂದರ ನಾಯ್ಕರವರ ಮನೆಯ ಬಳಿ ನಿಲ್ಲಿಸಿ, ಕೊಳವೆ ಬಾವಿಯ ಪೈಪ್ ನಲ್ಲಿ ನೀರು ಹಾಕಿದರು. ಅಷ್ಟು ಹೊತ್ತಿಗೆ ಬಟ್ಟೆಮಾರು ವಿನ ಎಸ್.ಎಸ್.ಎಫ್, ಕೆ.ಎಮ್.ಜೆ.ಎಸ್.ವೈ.ಎಸ್. ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ತಮ್ಮ ಮನೆಗಳಿಂದ ನೀರನ್ನು ತಂದು ಹಾಕಲು ಪ್ರಾರಂಭಿಸಿದರು. ಜೊತೆಗೆ ಸ್ಥಳೀಯ ಅಂಗನವಾಡಿಯ ಕಾರ್ಯಕರ್ತೆ ಕೂಡಾ ನೀರು ಹಾಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಅದಾಗಲೇ ಬೆಂಕಿಯ ಜ್ಞಾಲೆ ಅತೀಯಾಗಿತ್ತು. ಆದರೆ ಯಾವುದನ್ನು ಲೆಕ್ಕಿಸದೇ ಯುವಕರು ಕಾರ್ಯ ಪ್ರವೃತ್ತರಾದರು.
ಆ ವೇಳೆಗೆ ಸ್ಥಳೀಯ ವಾರ್ಡ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆಯವರಿಗೆ ಮಾಹಿತಿ ದೊರೆತು ಅಗ್ನಿಶಾಮಕ ದಳದವರಿಗೆ ಕೂಡಲೇ ಸ್ಥಳಕ್ಕೆ ಬರಲು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದರು. ಪಕ್ಕದಲ್ಲೆ ಕೆಲಸ ಮಾಡುತ್ತಿದ್ದ ವಿನಯ ಪ್ರಸಾದ್ ಕೂಡಾ ಲಾರಿಯಿಂದ ಬೆಂಕಿ ಹತ್ತಿದ ಹುಲ್ಲನ್ನು ಜೆ.ಸಿ.ಬಿ.ಯಿಂದ ತೆರವು ಮಾಡಿದರು. ಪಂಚಾಯತ್ ನಿಂದ ಸಿಬ್ಬಂದಿ ರವಿ ಮತ್ತು ಸುರೇಶ್ ಗೌಡ ಕೂಡಾ ಸಹಕರಿಸಿದರು.