ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ!

ಶಿವಮೊಗ್ಗ: ರೈಲಿಗೆ (Train) ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ (Station Master) ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಶಿವಮೊಗ್ಗದ (Shivamogga) ಕುಂಸಿ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಸ್ಟೇಷನ್ ಮಾಸ್ಟರ್ ಅನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ಅರುಣ್ ಕುಮಾರ್ ಬಿಹಾರ (Bihar) ಮೂಲದವರಾಗಿದ್ದು, ಕುಂಸಿ ರೈಲ್ವೆ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಬಂದ ಅರುಣ್ ಕುಮಾರ್ ಬುಧವಾರ ಬೆಳಗಿನ ಜಾವ ಕುಂಸಿ ಬಳಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಅರುಣ್ ಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ತನಿಖೆ ನಂತರ ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ.
ಗ್ಯಾಸ್ ಗೀಸರ್ ಲೀಕ್‍ನಿಂದ ಪತ್ನಿ ಸಾವು ಎಂದ ಪತಿ- ಕೊಲೆ ಆರೋಪ
ಕೋಲಾರ: ಮಹಿಳೆಯೊಬ್ಬಳು ಇಲ್ಲಿನ ಮಿಲ್ಲತ್ ನಗರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವರದಕ್ಷಿಣೆ (Dowry) ಕಿರುಕುಳಕ್ಕೆ ಬಲಿಯಾದ ಅನುಮಾನ ವ್ಯಕ್ತವಾಗಿದೆ.
ಮೃತಳನ್ನು ಮಿಲ್ಲತ್ ನಗರದ ಮಾಹೇನೂರ್ (22) ಎಂದು ಗುರುತಿಸಲಾಗಿದೆ. ಆಕೆಯ ಪತಿ ಸಯ್ಯದ್ ಶುಹೇಬ್ ಎಂಬಾತ ಕೊಲೆ ಮಾಡಿ ಗ್ಯಾಸ್ ಗೀಸರ್ ಲೀಕ್‍ನಿಂದ ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾನೆ. ಅಲ್ಲದೇ ಆತ ಕಳೆದ ಕೆಲವು ತಿಂಗಳುಗಳಿಂದ ಹಣ, ಜಾಗ ಹಾಗೂ ಬುಲೆಟ್ ಬೈಕ್‍ಗಾಗಿ ಪತ್ನಿಯ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈಗಾಗಲೇ ಮೂರು ಬಾರಿ ನ್ಯಾಯ ಪಂಚಾಯ್ತಿ ಮಾಡಿದ್ದೇವೆ. ಇಂದು ಮುಂಜಾನೆ ಸಹ ಮೃತ ಮಹಿಳೆ ಕರೆ ಮಾಡಿ ಪತಿ ಹಣ ತರುವಂತೆ ಪೀಡಿಸುತ್ತಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಇದರಿಂದ ಗಲಾಟೆ ಮಾಡಿ ಮಹಿಳೆಯ ಹತ್ಯೆ ಮಾಡಲಾಗಿದೆ ಎಂದು ಸಂಬಂಧಿಕರು ಹೇಳಿಕೊಂಡಿದ್ದಾರೆ.
ಈ ಸಂಬಂಧ ಗಲ್ ಪೇಟೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಯ್ಯದ್ ಶುಹೇಬ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.