ಒಂದುವರೆ ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ನುಂಗಿದ ಎಮ್ಮೆ; ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು!
ಮುಂಬೈ: ದನ-ಕರುಗಳು ಎಮ್ಮೆ ಕೋಣಗಳು ಹುಲ್ಲು ಮೇವು ಅಥವಾ ಕಲ್ಲುಗಳನ್ನು ತಿನ್ನುವುದನ್ನು ನೀವು ನೋಡಿರಬಹುದು, ಆಗಾಗ ಪೇಪರ್ ಮತ್ತು ಪ್ಲಾಸ್ಟಿಕ್ ತಿನ್ನುವುದನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಮೇವಿನ ಜೊತೆಗೆ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ತಾಳಿಯನ್ನು ನುಂಗಿದೆ ಎಮ್ಮೆಯ ಬಗ್ಗೆ!
ಹೌದು.. ಎಮ್ಮೆಯೊಂದು ಮೇವಿನ ಜೊತೆಗೆ ಮಹಿಳೆಯೊಬ್ಬರ ಒಂದೂವರೆ ಲಕ್ಷ ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ನುಂಗಿರುವ ಅತ್ಯಪರೂಪದ ಘಟನೆ ವರದಿಯಾಗಿದೆ. ಮಹಿಳೆಯ ಮಾಂಗಲ್ಯ ಸರ ಇಟ್ಟ ಜಾಗದಲ್ಲಿ ಕಾಣಿಸದೇ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆ ಸ್ನಾನಕ್ಕೆ ತೆರಳುವ ಮೊದಲು ಮಂಗಳಸೂತ್ರವನ್ನು ತೆಗೆದು ಸೋಯಾಬೀನ್ ಮತ್ತು ಕಡಲೆಕಾಳು ತುಂಬಿದ ಬುಟ್ಟಿಯ ಮೇಲೆ ಇರಿಸಿ ಹೋಗಿದ್ದರು. ಆದರೆ ಮಹಿಳೆ ಸ್ನಾನಕ್ಕೆ ಹೋಗಿದ್ದ ವೇಳೆ ಬುಟ್ಟಿಯಲ್ಲಿದ್ದ ಸೋಯಾಬೀನ್ ಮತ್ತು ಕಡಲೆಕಾಳು ಕಂಡು ತಿನ್ನಲು ಆರಂಭಿಸಿದೆ.
ನಂತರ ವೈದ್ಯರು ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಎಮ್ಮೆಯ ಹೊಟ್ಟೆಯಿಂದ ಚಿನ್ನದ ಮಂಗಳಸೂತ್ರವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಈ ಶಸ್ತ್ರಚಿಕಿತ್ಸೆಯ ನಂತರ ಎಮ್ಮೆಗೆ ಸುಮಾರು 65 ಹೊಲಿಗೆಗಳನ್ನು ಹಾಕಲಾಗಿದೆ.
ಮಹಿಳೆ ಸ್ನಾನಕ್ಕೆ ತೆರಳುವ ಮುನ್ನ ಮಂಗಳಸೂತ್ರವನ್ನು ಸೋಯಾಬೀನ್ ಮತ್ತು ಕಡಲೆಕಾಯಿಯ ಬುಟ್ಟಿಯ ಮೇಲೆ ಹಾಕಿದ್ದರೂ ಕೂಡ ಸ್ನಾನ ಮಾಡಿದ ನಂತರ ಸುಮಾರು ಎರಡು ಗಂಟೆಗಳ ಕಾಲ ಮಹಿಳೆಗೆ ತನ್ನ ಮಂಗಳಸೂತ್ರದ ಬಗ್ಗೆ ನೆನಪೇ ಆಗಿಲ್ಲ. ಆ ನಂತರ ಮಂಗಳಸೂತ್ರವನ್ನು ಹುಡುಕಲು ಆರಂಭಿಸಿದ್ದಾರೆ.
ಕೊನೆಗೆ ಮಂಗಳಸೂತ್ರ ಸಿಗದೆ ಇದ್ದಾಗ ಮಹಿಳೆ ಗಂಡನಿಗೆ ವಿಷಯ ಹೇಳಿದ್ದಾರೆ. ಆಗ ಕೂಡಲೇ ವೈದ್ಯರನ್ನು ಕರೆಸಿ ಪರೀಕ್ಷೆ ನಡೆಸಿದಾಗ ಎಮ್ಮೆಯ ಹೊಟ್ಟೆಯಲ್ಲಿ ಲೋಹದ ವಸ್ತು ಇರುವುದು ದೃಢಪಟ್ಟಿದೆ.
ಮಂಗಳಸೂತ್ರವನ್ನು ಪತ್ತೆಹಚ್ಚಲು ಮೆಟಲ್ ಡಿಟೆಕ್ಟರ್ ಅನ್ನು ಮೊದಲು ಬಳಸಿದ ವೈದ್ಯರ ತಂಡ ಎಮ್ಮೆಯ ಹೊಟ್ಟೆಯಲ್ಲಿ ಲೋಹವಿರುವುದನ್ನು ದೃಢಪಡಿಸಿದೆ. ಲೋಹ ಇರುವ ಬಗ್ಗೆ ಮಾಹಿತಿ ಪಡೆದು ಇತರೆ ಮಾಹಿತಿ ಕಲೆಹಾಕಿದ ವೈದ್ಯರು ಎಮ್ಮೆಯ ಹೊಟ್ಟೆಯಲ್ಲಿ ಮಂಗಳಸೂತ್ರವಿದೆ ಎಂದು ತಿಳಿಸಿದ್ದಾರೆ.
ಪ್ರಾಣಿಗಳಿಗೇನೋ ಯಾವುದನ್ನು ತಿನ್ನಬೇಕು ತಿನ್ನಬಾರದು ಅನ್ನೋದು ಗೊತ್ತಾಗಲ್ಲ, ಮನುಷ್ಯರಿಗೂ ಗೊತ್ತಾಗ್ಬೇಡ್ವಾ ಯಾವುದನ್ನು ಎಲ್ಲಿಡಬೇಕು ಅನ್ನೋದು. ನೀವು ಕೂಡ ಜಾನುವಾರುಗಳಿಗೆ ಮೇವು ನೀಡುವಾಗ ಅಥವಾ ಆಹಾರವನ್ನು ನೀಡುವಾಗ ಸರಿಯಾದ ಕಾಳಜಿ ವಹಿಸಿ. ಪ್ರಾಣಿಗಳು ಸಾಮಾನ್ಯವಾಗಿ ಮೇವಿನ ಜೊತೆಗೆ ಪ್ಲಾಸ್ಟಿಕ್ ಅಥವಾ ಇತರ ಜೀರ್ಣವಾಗದ ವಸ್ತುಗಳನ್ನು ಸೇವಿಸುತ್ತವೆ. ಇದರಿಂದಾಗಿ ಪ್ರಾಣಿಗಳು ಸಾಯುವ ಸಂಭವವೂ ಇರುತ್ತದೆ.