ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಮಗು ಸಾವು...!
ಆಂಧ್ರಪ್ರದೇಶ: ಮದುವೆಯಾಗಿ 7 ವರ್ಷಗಳ ವರೆಗೆ ಮಕ್ಕಳಿಲ್ಲ ಎಂಬ ದು:ಖದಲ್ಲಿದ್ದ ದಂಪತಿಗೆ 8 ತಿಂಗಳ ಹಿಂದೆ ಹೆಣ್ಣು ಮಗುವೊಂದರ ಜನನವಾಗಿದೆ. ಇನ್ನೇನು ತಮ್ಮ ಎಲ್ಲಾ ಕಷ್ಟಗಳು ಮುಗಿದು ಮಗುವಿನೊಂದಿಗೆ ಸುಖ ಜೀವನ ನಡೆಸಬೇಕು ಅನ್ನುವಷ್ಟರಲ್ಲಿ ದಂಪತಿಗಳ ಜೀವನದಲ್ಲಿ ಆಘಾತವೇ ಎದುರಾಗಿದೆ. ನಿಂಬೆಹಣ್ಣು ಮಗುವಿನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಆಟವಾಡುತ್ತಾ ನಿಂಬೆಹಣ್ಣು ನುಂಗಿದ 9 ತಿಂಗಳ ಪುಟ್ಟ ಹಸುಗೂಸು ಸಾವನ್ನಪ್ಪಿರುವ ಘಟನೆ ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲದ ಮಲ್ಲೇನಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅನಂತಪುರ ಜಿಲ್ಲೆಯ ಪೆದ್ದವಡುಗೂರು ಮಂಡಲ ಮಲ್ಲೇನಿಪಲ್ಲಿಯ ಸಾಕಿದೀಪ ಮತ್ತು ಗೋವಿಂದರಾಜ್ ಅವರ ಹೆಣ್ಣು ಮಗು ಜಸ್ವಿತಾ (9 ತಿಂಗಳು). ಮನೆಯ ಜಗುಳಿಯಲ್ಲಿ ಆಟವಾಡುತ್ತಿದ್ದ ಮಗು ಜಗುಲಿಯ ಮೇಲೆ ಬಿದ್ದ ನಿಂಬೆಹಣ್ಣನ್ನು ಬಾಯಿಗೆ ಹಾಕಿಕೊಂಡಿದೆ. ಇದನ್ನು ಗಮನಿಸಿದ ತಾಯಿ ಕೂಡಲೇ ಅದನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಮಗು ಅದಾಗಲೇ ನುಂಗಿದ್ದರಿಂದ ಲಿಂಬೆ ಹಣ್ಣು ಗಂಟಲಲ್ಲಿ ಸಿಕ್ಕಿಕೊಂಡಿದ್ದು, ಉಸಿರಾಟದ ತೊಂದರೆ ಉಂಟಾಗಿದೆ.
ತಕ್ಷಣ ಪೆದವಡುಗೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಗುವಿನ ಸಾವಿನ ಸುದ್ದಿ ದಂಪತಿಗಳಿಗೆ ಆಘಾತವನ್ನುಂಟು ಮಾಡಿದೆ. ಮದುವೆಯಾಗಿ 7 ವರ್ಷಗಳ ಬಳಿಕ ದೇವರ ವರಪ್ರಸಾದವೆಂದು ನಂಬಿದ್ದ ಈ ಪುಟ್ಟ ಮಗುವಿನ ಸಾವು ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.
ಕೊಳದಲ್ಲಿ ಚೆಂಡಾಟವಾಡುತ್ತಾ ಫುಲ್ ರಿಲಾಕ್ಸಿಂಗ್ ಮೂಡ್ನಲ್ಲಿ ಹುಲಿರಾಯ
ಹುಲಿಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಇವುಗಳು ಕಾಡಿನಲ್ಲಿ ಯಾವುದಾದರೂ ಬೇಟೆ ಸಿಗುತ್ತಾ ಅಂತ ಅತ್ತಿಂದ ಇತ್ತ ಕಣ್ಣಾಯಿಸುತ್ತಾ ಗಾಂಭೀರ್ಯದಿಂದ ನಡೆದಾಡುತ್ತಿರುತ್ತವೆ. ಹೀಗೆ ಹುಲಿಗಳ ಶಿಕಾರಿ, ಕಾದಾಟ, ಗಾಂಭೀರ್ಯದ ನಡಿಗೆಯನ್ನು ನೋಡುವುದೇ ಚಂದ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ನೀವು ಯಾವತ್ತಾದ್ರೂ ಹುಲಿಗಳು ಶಾಂತ ರೀತಿಯಿಂದ ವರ್ತಿಸುತ್ತಾ, ಪುಟ್ಟ ಮರಿಗಳಂತೆ ಆಟವಾಡುತ್ತಾ, ತುಂಟಾಟವಾಡುತ್ತ ಸಮಯ ಕಳೆಯುವುದನ್ನು ನೋಡಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ, ಹುಲಿಯೊಂದು ಬೇಟೆಗೆ ಕೊಂಚ ಬ್ರೇಕ್ ನೀಡಿ ಕೊಳದ ನೀರಿನಲ್ಲಿ ತನ್ನ ಪಾಡಿಗೆ ಚೆಂಡಾಟವಾಡುತ್ತಾ ವಿಶ್ರಾಂತಿ ಪಡೆದಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಈ ಮುದ್ದಾದ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
kami-katze Cat ART ಎಂಬ ಫೇಸ್ ಬುಕ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಹುಲಿರಾಯ ಫುಲ್ ರಿಲಾಕ್ಸಿಂಗ್ ಮೂಡ್ ಅಲ್ಲಿ ಕೊಳದ ನೀರಿನಲ್ಲಿ ಚೆಂಡಾಟವಾಡುತ್ತ, ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಕೊಳದಲ್ಲಿ ಹುಲಿರಾಯ, ಬೇಟೆಯಾಡಿ ಸುಸ್ತಾಗಿದೆ, ಸ್ವಲ್ಪ ವಿಶ್ರಾಂತಿ ಪಡೆದ್ರೆ ಚೆನ್ನಾಗಿರುತ್ತೆ ಅಂತ ಹೇಳಿ, ಕೆಂಪು ಬಣ್ಣದ ಚೆಂಡೊಂದನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾ, ಆ ಚೆಂಡಿನ ಮೇಲೆ ಮುಖವನ್ನಿಟ್ಟು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.
ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಹುಲಿರಾಯ ನೀರಾಟವಾಡುವ ಮುದ್ದಾದ ದೃಶ್ಯವನ್ನು ಕಾಣಲು ಎರಡು ಕಣ್ಣು ಸಾಲದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಮುದ್ದಾಗಿದೆ, ಹುಲಿ ಚೆಂಡಾಟ ಆಡುವುದನ್ನು ಬಹಳ ಆನಂದಿಸುತ್ತಿದೆʼ ಎಂದು ಹೇಳಿದ್ದಾರೆ. ಇನ್ನು ಹಲವರು ಹುಲಿಯ ನೀರಿನಲ್ಲಿ ಆಟವಾಡುತ್ತ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ತುಂಬಾ ಮುದ್ದಾಗಿದೆ ಎನ್ನುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.