ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!
ಚಿಕ್ಕಮಗಳೂರು, ಫೆಬ್ರವರಿ 21: 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಒಂದಡೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ ಎನ್ನುತ್ತಿದ್ದರೆ, ಇನ್ನೊಂದೆಡೆ ಈ ಬಾರಿ ಶೋಭಾ ಕರಂದ್ಲಾಜೆಗೆ ಬಿಜೆಪಿ ಮುಖಂಡರು ಈ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರು ಪತ್ರ ಚಳುವಳಿ ಆರಂಭಿಸಿದ್ದಾರೆ.
ಕೇಂದ್ರ ಸಚಿವೆ ಹಾಗೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡದಂತೆ ಚಿಕ್ಕಮಗಳೂರಿನಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಪತ್ರ ಚಳುವಳಿ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಕೆಲ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಹಾಗೂ ಅಮಿತ್ ಷಾಗೆ ಪತ್ರ ಬರೆದ ಬಿಜೆಪಿ ಕಾರ್ಯಕರ್ತರು ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ. ಮುಂದಿನ ದಿನದಲ್ಲಿ ನಾವು ರಾಷ್ಟ್ರೀಯ ನಾಯಕರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿಗೆ ನಿರ್ಧರಿಸಿದ್ದೇವೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದಲ್ಲಿ ಎರಡು ಭಾರಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದು ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಿಲ್ಲ ಹಾಗಾಗಿ ಬಿಜೆಪಿ ಟಿಕೆಟ್ ಹೊಸ ಮುಖಕ್ಕೆ ನೀಡಬೇಕು ಎಂದು 5 ಸಾವಿರಕ್ಕೂ ಹೆಚ್ಚು ಪತ್ರಗಳನ್ನ ಪೋಸ್ಟ್‌ನಲ್ಲಿ ಕಳುಹಿಸುವ ಮೂಲಕ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ ಎಂದ ಶೋಭಾ ಕರಂದ್ಲಾಜೆ ಸಂಸದೆ ಶೋಭಾ ಕರಂದ್ಲಾಜೆ ಈ ಬಾರಿ ಲೋಕಸಭಾ ಚುನಾವಣೆಯ ಸ್ಪರ್ಧೆ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹಲವು ಕ್ಷೇತ್ರಗಳಿಂದ ನನ್ನ ಹೆಸರು ಕೇಳಿ ಬರುತ್ತಿದೆ. ಕನಿಷ್ಠ 5-6 ಕ್ಷೇತ್ರಗಳು ನನ್ನ ಹೆಸರನ್ನು ಹೇಳುತ್ತಿವೆ. ಆದರೆ ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರು.
ನಾನು ಬೇರೆ ಕ್ಷೇತ್ರಗಳಿಗೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ ಪಕ್ಷ ಬದಲಾವಣೆ ಬಯಸಿದಲ್ಲಿ ಅದನ್ನು ಪಾಲಿಸಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದಿದ್ದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರೆಂಬುದಕ್ಕೆ ಹಲವು ಹೆಸರುಗಳು ಕೇಳಿಬರುತ್ತಿದೆ. ಬಿಜೆಪಿಗೆ ಇದು ಗೆಲುವಿನ ಕ್ಷೇತ್ರವಾಗಿರುವುದರಿಂದ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಮಾಜಿ ಸಚಿವ ಸಿ.ಟಿ ರವಿ, ಪ್ರಮೋದ್ ಮಧ್ವರಾಜ್ ಹಾಗೂ ಜೊತೆಗೆ ಡಿ.ಎನ್. ಜೀವರಾಜ್ ಹೆಸರು ಕೂಡ ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದ್ದು, ಹೈಮಾಂಡ್ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವಿನ ಕುದುರೆಗೆ ಮಣೆ ಹಾಕಬೇಕಿದೆ.