ದೆಹಲಿ: ಒಂದೇ ಮನೆಯಲ್ಲಿ ನಾಲ್ವರ ಮೃತದೇಹಗಳು ಪತ್ತೆ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಉತ್ತರ ದೆಹಲಿಯ ಖೇಡಾ ಪ್ರದೇಶದ ಮನೆಯೊಂದರಲ್ಲಿ 4 ಜನರ ಮೃತ ದೇಹಗಳು ಪತ್ತೆಯಾಗಿವೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕೋಣೆಯಲ್ಲಿ ಅಗ್ಗಿಸ್ಟಿಕೆ ಉರಿಯುತ್ತಿತ್ತು. ಮನೆಯ ಸದಸ್ಯರು ಚಳಿಯಿಂದ ಪಾರಾಗಲು ಅಗ್ಗಿಸ್ಟಿಕೆ ಹಚ್ಚಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೊಗೆಯಿಂದ ಉಸಿರುಗಟ್ಟಿ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಗಂಡ-ಹೆಂಡತಿ ಮತ್ತು ಅವರ 7 ಮತ್ತು 8 ವರ್ಷದ ಇಬ್ಬರ ಮಕ್ಕಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಹೆಚ್ಚುವರಿ ಡಿಸಿಪಿ (ಹೊರ ಉತ್ತರ) ಬಿ ಭರತ್ ರೆಡ್ಡಿ, ವಿಧಿವಿಜ್ಞಾನ ತಂಡವನ್ನು ಕರೆಸಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಉಸಿರುಗಟ್ಟುವಿಕೆಯಿಂದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಸಂಜೆಯವರೆಗೂ ಮನೆಯವರು ಬಾಗಿಲು ತೆರೆಯದಿದ್ದಾಗ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.