ಬೆಂಗಳೂರು: ರಾಮನೂರಿನ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ದೇಶದೆಲ್ಲೆಡೆ ರಾಮನ ಜಪ ಜೋರಾಗಿದೆ. ಹಾಗೆಯೇ ರಾಜಧಾನಿಯ ಮಾಲ್ ಗಳಲ್ಲಿ ರಾಮನ ಸ್ಮರಣೆ ಆರಂಭವಾಗಿದೆ.
ರಂಗೋಲಿಯಲ್ಲಿ ಅರಳಿದ ರಾಮಮಂದಿರ
ಹೌದು. ಇದೇ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಂತರ ಹಿಂದುಗಳು ತಮ್ಮದೇ ಆದ ರೀತಿಯಲ್ಲಿ ರಾಮನ ಭಕ್ತಿ ಪ್ರದರ್ಶಿಸುತ್ತಿದ್ದಾರೆ. ಅದೇ ರೀತಿ ಸಿಲಿಕಾನ್ ಸಿಟಿ ಬೆಂಗಳೂರಿನ ಜಿಟಿ ಮಾಲ್‍ನಲ್ಲಿ ಅಯೋಧ್ಯೆಯ ರಾಮಮಂದಿರವನ್ನು, ಹಿಂದೆ ರಾಮನೇ ಆಗಸದಲ್ಲಿ ಪ್ರತ್ಯಕ್ಷವಾದ ದೃಶ್ಯವನ್ನು ರಂಗೋಲಿಯಿಂದ ಸೆರೆಹಿಡಿಯಲಾಗಿದೆ. ಇದು ನೋಡುಗರನ್ನ ಸೆಳೆಯುತ್ತಿದೆ.
ಈ ರಂಗೋಲಿ 25 ಅಡಿ ಉದ್ದ, 25 ಅಡಿ ಅಗಲದಲ್ಲಿ ರಚನೆಯಾಗಿದೆ. ಚಿತ್ರದ ವಿಶೇಷ ಏನೆಂದರೆ ರಾಮಮಂದಿರವನ್ನ ನಿರ್ಮಿಸಿದ ನಂತರ ರಾಮಮಂದಿರ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದ ಕೂಲಿ- ಕಾರ್ಮಿಕರಿಗೆ ರಾಮ ದರ್ಶನ ನೀಡಿದ ಎನ್ನುವ ಕಾನ್ಸೆಪ್ಟ್ ನಲ್ಲಿ ತ್ರಿಡಿ ಎಫೆಕ್ಟ್ ನಲ್ಲಿ ಈ ಚಿತ್ರವನ್ನ ಬಿಡಿಸಲಾಗಿದೆ ಎಂದು ವಿದ್ಯಾರ್ಥಿ ಅಕ್ಷಯ್ ಜಾಲಿಹಾಳ್ ತಿಳಿಸಿದ್ದಾರೆ.
ಈ ರಂಗೋಲಿ ಹೈಪರ್ ರಿಯಲಿಸ್ಟಿಕ್ ರಂಗೋಲಿಯಾಗಿದ್ದು, ಹೈ ಎಂಡ್ ತ್ರಿಡಿ ಎಫೆಕ್ಟ್ ನಲ್ಲಿದೆ. ಈ ರಂಗೋಲಿಗೆ 45-50 ಬಣ್ಣಗಳ ಶೇಡ್ ಬಳಸಲಾಗಿದೆ. ಸಾಂಪ್ರದಾಯಿಕ ಕಲೆಯಾದ ರಂಗೋಲಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ಬರೆಯಲಾಗಿದೆ. ಹಿಂದುಗಳಿಗೆ ಹೆಮ್ಮೆಯಾದ ರಾಮಮಂದಿರವನ್ನು ಅಯೋಧ್ಯೆಗೆ ಹೋಗಿ ನೋಡಿ ಬರಲು ಆಗಲ್ಲ. ಈ ಮೂಲಕವಾದ್ರೂ ರಾಮನನ್ನು ಕಣ್ತುಂಬಿಕೊಳ್ಳುತ್ತೇವೆ ಎಂದು ಸಿಲಿಕಾನ್ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ರಾಮನ ಜಪ ಬೆಂಗಳೂರಿನೆಲ್ಲೆಡೆ ಮೊಳಗುತ್ತಿದೆ.