ಚಾರ್ಮಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಉರುಳಿದ ಟಿಪ್ಪರ್..!
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಸೋಮನ ಕಾಡು ಸಮೀಪ ಟಿಪ್ಪರ್ ಲಾರಿ 2000 ಅಡಿ ಪ್ರಪಾತಕ್ಕೆ ಬಿದ್ದು ಚಾಲಕ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ಟಿಪ್ಪರ್ ಮಂಜು ಕವಿದ ವಾತಾವರಣವಿದ್ದರಿಂದ ದಾರಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ ಉರುಳಿ ಬಿದ್ದ ರಭಸಕ್ಕೆ ಟಿಪ್ಪರ್ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ ಚಾಲಕನಿಗೆ ಸೊಂಟಕ್ಕೆ ತುಂಬಾ ಪೆಟ್ಟಾಗಿದ್ದು ಅಂಬುಲೆನ್ಸ್ ಮೂಲಕ ಉಜಿರೆಯ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿಗಳು ಸಮಾಜ ಸೇವಕ ಆರಿಫ್ ಹಾಗೂ ಅಬ್ದುಲ್ ರೆಹಮಾನ್ ಕಾರ್ಯಚರಣೆಯಲ್ಲಿ ಇದ್ದರು.
ಉಡುಪಿ: ಮಹಿಳೆ ನಾಪತ್ತೆ
ಉಡುಪಿ : ಬಹ್ರೇನ್ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಶುಭ ಕೆ (38) ಎಂಬ ಮಹಿಳೆಯು ಜನವರಿ 3 ರಂದು ವಿದೇಶದಿಂದ ಗಂಡನ ಮನೆಯಾದ ಉಡುಪಿ ಗೋಪಾಲಪುರದಲ್ಲಿರುವ ಮನೆಗೆ ಬಂದು, ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.
5 ಅಡಿ ಎತ್ತರ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ, ಮರಾಠಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.