ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಕೆ ಕಡ್ಡಾಯಕ್ಕೆ ಸುಗ್ರೀವಾಜ್ಞೆ: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ!
ಬೆಂಗಳೂರು: ರಾಜ್ಯಾದ್ಯಂತ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆ ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳ ಮೇಲ್ಭಾಗದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ ಹಾಗೂ ಜಾಹೀರಾತು, ಸೂಚನಾ ಫಲಕಗಳಲ್ಲೂ ಕನ್ನಡಕ್ಕೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯಿದೆಯನ್ನು’ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ರಾಜ್ಯ ಸರ್ಕಾರ ಶುಕ್ರವಾರ ಮಹತ್ವದ ನಿರ್ಣಯ ಕೈಗೊಂಡಿದೆ.
ಇತ್ತೀಚೆಗೆ ತಮ್ಮ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಗ್ರೀವಾಜ್ಞೆ ಮೂಲಕ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿ ಮಾಡುವುದಾಗಿ ತಿಳಿಸಿದ್ದರು. ಕನ್ನಡ ಸಂಸ್ಕೃತಿ ನಿರ್ದೇಶಕರ ಬದಲಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದವರನ್ನು ಸಂಚಾಲಕರನ್ನಾಗಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯವರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಈ ಅಂಶವು ತಿದ್ದುಪಡಿಯಲ್ಲಿ ಒಳಗೊಂಡಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ನಾಮಫಲಕಗಳಲ್ಲಿ ಮೇಲಿನ ಅರ್ಧಭಾಗದಲ್ಲಿ ಕನ್ನಡ ಹೆಸರು ಅಳವಡಿಸಬೇಕು ಎಂದು ಈ ಹಿಂದೆ ಕಾನೂನು ಹೇಳಿತ್ತು. ಸಿದ್ದರಾಮಯ್ಯ ಸರ್ಕಾರ ಮೇಲಿನ ಅರ್ಧ ಭಾಗದ ಬದಲು, ಶೇ.60ರಷ್ಟು ಕನ್ನಡ ಕಡ್ಡಾಯ ಮಾಡಿದೆ. ನಾಮಫಲಕಗಳಲ್ಲಿ ಕನ್ನಡ ಹೆಸರು ಮೇಲಿನ ಭಾಗದಲ್ಲೇ ಇರಬೇಕೆಂದು ಸೂಚಿಸಿದೆ.
ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು: ವಿ.ಸೋಮಣ್ಣ
ಬೆಂಗಳೂರು: ನನ್ನ ಸೋಲಿಗೆ ಯಾರು ಯಾರು ಕಾರಣ ಎಂದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಗೊತ್ತಿದೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಳ್ಳದಿದ್ದರೆ ನಾನು ಸಿಡಿದೇಳಬೇಕಾಗುತ್ತದೆ ಎಂದು ಮಾಜಿ ಸಚಿವ ವಿ ಸೋಮಣ್ಣ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಿಪಡಿಸುವುದು, ಬಿಡುವುದು ಅವರಿಗೆ ಸೇರಿದ್ದು ಎಂದರು. ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡಲ್ಲ. ನಮ್ಮಂಥವರಿಗೆ ಏನು ಅನಾನುಕೂಲ ಎಂಬ ಮಾಹಿತಿ ಅವರಿಗೆ ಇದೆ. ಅವರಿಗೇ ಅಂಟಿಕೊಂಡು ಹೋಗ್ತೇನೆ ಅಂದರೇ ಬೇರೆ ಮಾತಾಡಬೇಕಾಗುತ್ತೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಯುವಕ. ನೀನು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಅಂತ ಇದ್ದಾರೆ. ಸೋಲಿಗೆ ಕಾರಣರಾದ ಮನೆಹಾಳರನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.