ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಕಂದಕಕ್ಕೆ ಉರುಳಿದ ಬಸ್; ಓರ್ವ ಸಾವು, 25 ಮಂದಿ ಗಂಭೀರ..!
ಯಾದಗಿರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು (Bus) 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, 25 ಜನ ಗಂಭೀರ ಗಾಯಗೊಂಡ ಘಟನೆ ಸುರಪುರದ (Surapura) ದೇವಾಪುರದ ಬಳಿ ನಡೆದಿದೆ.
ಘಟನೆಯಲ್ಲಿ ಹುಮನಬಾದ್‍ನ ಹಳ್ಳಿಖೇಡ ನಿವಾಸಿ ಬಾಲು ಕುಮಾರ್ (36) ಮೃತ ಪ್ರಯಾಣಿಕ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ (Accident) ಗಂಭೀರ ಗಾಯಗೊಂಡಿರುವ ಎಲ್ಲಾ ಗಾಯಾಳುಗಳನ್ನ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಬೀದರ್‌ನಿಂದ ಬೆಂಗಳೂರಿಗೆ (Bengaluru) 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ತೆರಳುತ್ತಿತ್ತು, ಈ ವೇಳೆ ಅಪಘಾತ ಸಂಭವಿಸಿದೆ.
ಮಿತಿ ಮೀರಿದ ವೇಗದಲ್ಲಿ ಚಲಾಯಿಸಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಬಳಿಕ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಬುದ್ಧಿಮಾಂದ್ಯ ಮಗಳ ಮೇಲೆ ತಂದೆಯಿಂದ ನಿರಂತರ ಅತ್ಯಾಚಾರ
ಬೆಳಗಾವಿ: ಬುದ್ಧಿಮಾಂದ್ಯ ಮಗಳ (Daughter) ಮೇಲೆ ತಂದೆಯೇ (Father) ನಿರಂತರ ಅತ್ಯಾಚಾರ (Rape) ಎಸಗಿ, ಗರ್ಭಿಣಿಯನ್ನಾಗಿಸಿದ ಪ್ರಕರಣ ಮಗು ಜನಿಸಿದ ಬಳಿಕ ಬೆಳಕಿಗೆ ಬಂದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೆಳವಟ್ಟಿ (Belavatti) ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬೆಳವಟ್ಟಿ ಗ್ರಾಮದಲ್ಲಿ ತಾಯಿ ಇಲ್ಲದ ಮಾನಸಿಕ ಅಸ್ವಸ್ಥ ಮಗಳೊಂದಿಗೆ ಮನೆಯಲ್ಲಿ ಆಕೆಯ ತಂದೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಆಕೆ ಗರ್ಭಿಣಿಯಾಗಿರುವ ಬಗ್ಗೆ ಸ್ಥಳೀಯರಿಂದ ಅನುಮಾನ ವ್ಯಕ್ತವಾದ ಬಳಿಕ ಗ್ರಾಮದ ಆಶಾ ಕಾರ್ಯಕರ್ತೆಯರ ಮೂಲಕ ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವ ಮಾಹಿತಿ ದೃಢಪಟ್ಟಿದೆ.
ಸರ್ಕಾರೇತರ ಸಂಸ್ಥೆಯೊಂದು 2023ರ ಫೆಬ್ರವರಿ ತಿಂಗಳಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಬುದ್ಧಿಮಾಂದ್ಯೆಯ ತಂದೆ ಮೇಲೆ ಅನುಮಾನಗೊಂಡು ತಂದೆ ಹಾಗೂ ಆಕೆಗೆ ಜನಿಸಿದ ಮಗುವಿನ ಡಿಎನ್‌ಎ ಪರೀಕ್ಷಿಸಿದ ಬಳಿಕ ಆತನೇ ಮಗುವಿನ ತಂದೆ ಎನ್ನುವುದು ದೃಢಪಟ್ಟಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು, ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಎನ್.ಜಿ.ಒ ದೂರು ನೀಡಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆಕೆಯ ತಂದೆಯೇ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಈ ಕುರಿತು ಸಂಬಂಧಿಸಿದ ನ್ಯಾಯಾಲಯಕ್ಕೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ತಿಳಿಸಿದರು.