ರಾಹುಲ್ ದ್ರಾವಿಡ್ ಕೋಚ್ ಸ್ಥಾನಕ್ಕೆ ವಿದಾಯ ; ವಿವಿಎಸ್ ಲಕ್ಷ್ಮಣ್ ಆಯ್ಕೆ ಸಾಧ್ಯತೆ!
ಐಸಿಸಿ ಏಕದಿನ ವಿಶ್ವಕಪ್ 2023ರ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಟೀಮ್ ಇಂಡಿಯಾದ ಒಂದು ಯುಗದ ಮುಕ್ತಾಯವನ್ನು ಸೂಚಿಸಿದೆ. ಏಕದಿನ ವಿಶ್ವಕಪ್ 2023 ರ ನಂತರ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಭಾರತೀಯ ತಂಡದೊಂದಿಗೆ ತನ್ನ ಎರಡು ವರ್ಷಗಳ ಒಪ್ಪಂದವನ್ನು ವಿಸ್ತರಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಪ್ರಸ್ತುತ ಎಸ್ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರು ದ್ರಾವಿಡ್ ಬದಲಿಗೆ ಮುಖ್ಯ ಕೋಚ್ ಆಗಿ ಆಯ್ಕೆ ಆಗಲಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ಮೂಲಗಳು ಈ ವಿಚಾರವನ್ನು ಟೈಮ್ಸ್ ಆಫ್ ಇಂಡಿಯಾಕ್ಕೆ ದೃಢಪಡಿಸಿದೆ. ಸದ್ಯ ವೈಜಾಗ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20I ಸರಣಿಗೆ ದ್ರಾವಿಡ್ ಅವರ ಆಪ್ತ ಸ್ನೇಹಿತ ಲಕ್ಷ್ಮಣ್ ಕೋಚ್ ಆಗಿ ಆಯ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ಆಸಕ್ತಿ ತೋರಿಸಿದ್ದಾರಂತೆ. ಅವರು ಟೀಮ್ ಇಂಡಿಯಾದ ಮುಖ್ಯ ತರಬೇತುದಾರರಾಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಅವಧಿಯ ಅಂತ್ಯ-ವಿವಿಎಸ್ ಲಕ್ಷ್ಮಣ್ ಯುಗ ಆರಂಭ!
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿನ ಸೋಲು ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ”ಲಕ್ಷ್ಮಣ್ ಅವರು ಕೋಚ್ ಸ್ಥಾನಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಸಮಯದಲ್ಲಿ, ಲಕ್ಷ್ಮಣ್ ಬಿಸಿಸಿಐನ ಉನ್ನತ ಮುಖ್ಯಸ್ಥರನ್ನು ಭೇಟಿ ಮಾಡಲು ಅಹ್ಮದಾಬಾದ್‌ಗೆ ಕೂಡ ತೆರಳಿದ್ದರು. ಅವರು ಟೀಮ್ ಇಂಡಿಯಾ ಕೋಚ್ ಆಗಿ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಮತ್ತು ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅವರು ಖಾಯಂ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ,” ಎಂದು ಬಿಸಿಸಿಐ TOI ಗೆ ತಿಳಿಸಿದೆ.
ಸದ್ಯ ಹೊಸ ಕೋಚಿಂಗ್ ಆಡಳಿತದಲ್ಲಿ ಟೀಮ್ ಇಂಡಿಯಾ ಯಾವ ದಿಕ್ಕಿನತ್ತ ಸಾಗಲಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಕುತೂಹಲವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20I ಡಿಸೆಂಬರ್ 10 ರಂದು ನಿಗದಿಯಾಗಿದೆ. ಇದಕ್ಕಾಗಿ ಡಿಸೆಂಬರ್ 5 ರೊಳಗೆ ಹರಿಣಗಳ ನಾಡಿಗೆ ನಿರ್ಗಮಿಸುವ ನಿರೀಕ್ಷೆಯಿದೆ.
ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಭಾರತ, ಏಷ್ಯಾಕಪ್‌ನಲ್ಲಿ ಜಯ, ಏಕದಿನ ವಿಶ್ವಕಪ್ ಫೈನಲ್, ಮತ್ತು ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆದ್ದಂತಹ ಗಮನಾರ್ಹ ಸಾಧನೆ ಮಾಡಿದೆ. ಆದಾಗ್ಯೂ, ವಿಶ್ವಕಪ್ ಫೈನಲ್‌ನಲ್ಲಿನ ಸೋಲು ದ್ರಾವಿಡ್ ಕೋಚ್ ಸ್ಥಾನಕ್ಕೆ ಮಹತ್ವದ ತಿರುವು ನೀಡಿತು. ಸದ್ಯದಲ್ಲೇ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಲಿದೆ.