ಜೀವಂತ ಹಾವಿನ ಜೊತೆ ಪುಟ್ಟ ಮಗುವಿನ ಆಡುವ ವಿಡಿಯೋ ವೈರಲ್..!
ಬೆಂಗಳೂರು: ಜಗತ್ತಿನ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಕೂಡ ಸೇರಿವೆ. ಇವುಗಳಲ್ಲಿ ಬಹುತೇಕ ವಿಷ ರಹಿತವಾಗಿದ್ದರೂ ಅನೇಕ ಮಂದಿ ʼಹಾವುʼ ಎನ್ನುವ ಪದ ಕಿವಿಗೆ ಬಿದ್ದರೆ ಸಾಕು ಬೆಚ್ಚಿ ಬೀಳುತ್ತಾರೆ. ಅಂತಹದರಲ್ಲಿ ಇಲ್ಲಿ ಚಿಕ್ಕ ಮಗುವೊಂದು ಜೀವಂತ ಹಾವನ್ನು ಗೊಂಬೆಯಂತೆ ಕೈಯಲ್ಲಿ ಹಿಡಿದು ನಿರ್ಭೀತಿಯಿಂದ ಆಟವಾಡುತ್ತಿದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ (Viral Video).
ಅದು ಇನ್ನೂ ಅಂಬೆಗಾಲಿಡುವ ಮಗು. ನೆಲದ ಮೇಲೆ ಕುಳಿತಿದೆ. ಪಕ್ಕದಲ್ಲೇ ಹಾವೊಂದು ಹರಿದಾಡುತ್ತಿದೆ. ಸಾಮಾನ್ಯ ಗೊಂಬೆಯನ್ನು ಎತ್ತಿಕೊಳ್ಳುವಂತೆ ಆ ಮಗು ಹಾವಿನ ಬಾಲ ಹಿಡಿದೆಳೆಯುತ್ತದೆ. ಕಾಲ ಬಳಿಗೆ ಬಂದ ಹಾವಿನ ತಲೆಯನ್ನು ಮಗು ಮುಟ್ಟುತ್ತದೆ. ಬಳಿಕ ಹಾವು ಆಚೆ ಹೋಗಲು ಪ್ರಯತ್ನಿಸುತ್ತದೆ. ಮತ್ತೊಮ್ಮೆ ಹಾವಿನ ಬಾಲವನ್ನು ಕೈಯಲ್ಲಿ ಹಿಡಿದು ಮಗು ಎಳೆಯುತ್ತದೆ. ಬಳಿಕ ಆಚೆ ಈಚೆ ಸರಿದಾಡಿದ ಹಾವು ಕೊನೆಗೆ ಮಗುವಿನಿಂದ ದೂರ ಹೊರಟು ಹೋಗುತ್ತಾರೆ. ಈ ದೃಶ್ಯವನ್ನು ಅನೇಕರು ಉಸಿರು ಬಿಗಿ ಹಿಡಿದು ವೀಕ್ಷಿಸಿದ್ದಾರೆ. ಹಾವು ಮಗುವಿಗೆ ಅಪಾಯ ಮಾಡದಿರುವುದನ್ನು ನೋಡಿ ನೆಮ್ಮದಿಯ ನಿಟ್ಟಿಸಿರು ಬಿಟ್ಟವರು ಎಷ್ಟೋ ಮಂದಿ. ಕೆಲವರು ಮಗುವಿನ ಧೈರ್ಯವನ್ನು ಹೊಗಳಿದರೆ, ಇತರರು ಮಗುವಿನ ಸುರಕ್ಷತೆ ಬಗ್ಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊವನ್ನು ಲಕ್ಷಾಂತರ ಮಂದಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ವಿಡಿಯೊವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಹಲವರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʼʼಛತ್ತೀಸ್‌ಗಢದಲ್ಲಿ ಹಳ್ಳಿಯೊಂದಿದೆ. ಅಲ್ಲಿನ ಮಕ್ಕಳು ದೊಡ್ಡ ದೊಡ್ಡ ಹಾವುಗಳೊಂದಿಗೆ ಆಟವಾಡುತ್ತಿರುತ್ತಾರೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼಇದು ನೀರು ಹಾವು. ವಿಷ ಹೊಂದಿರುವುದಿಲ್ಲʼʼ ಎಂದು ಹೇಳಿದ್ದಾರೆ ಇನ್ನೊಬ್ಬರು. ʼʼವಿಡಿಯೊ ಮಾಡಿದ್ದು ಯಾರು?ʼʼ ಎಂದು ಮತ್ತೊಬ್ಬರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ವಿಷ ರಹಿತವಾಗಿದ್ದರೂ ಮಕ್ಕಳನ್ನು ಹಾವಿನ ಜತೆ ಆಡಲು ಬಿಡಬಾರದು. ಮುಂದೊಂದು ದಿನ ಅವರು ವಿಷದ ಹಾವು ಕಂಡರೂ ಅಭ್ಯಾಸ ಬಲದಿಂದ ಅದರೊಂದಿಗೆ ಆಟವಾಡಲು ಮುಂದಾಗುವ ಅಪಾಯವಿದೆ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.
ಇದು ಮೊದಲ ಸಲವಲ್ಲ
ಹಾವಿನೊಂದಿಗೆ ಮಕ್ಕಳು ಆಟವಾಡುತ್ತಿರುವ ಪ್ರಕರಣ ಈ ಹಿಂದೆಯೂ ಅನೇಕ ಬಾರಿ ವರದಿಯಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮೂರು ವರ್ಷದ ಬಾಲಕನೊಬ್ಬ ಹಾವೊಂದನ್ನು ಎತ್ತಿಕೊಂಡು ಕಡಿದು ಕೊಂದ ಘಟನೆ ನಡೆದಿದೆ. ಅಂಗಳದಲ್ಲಿ ಆಟವಾಡಿಕೊಂಡಿದ್ದ ಬಾಲಕನ ಬಳಿಕೆ ಹಾವೊಂದು ಬಂದಿತ್ತು. ಕುತೂಹಲದಿಂದ ಹಾವನ್ನು ಎತ್ತಿಕೊಂಡು ಸಹಜವಾಗಿಯೇ ಆತ ಕಡಿದು ಬಿಟ್ಟಿದ್ದ. ಬಳಿಕ ಭಯದಿಂದ ಕಿರುಚಿಕೊಂಡಿದ್ದ. ಕೂಡಲೇ ಮನೆಯವರು ಧಾವಿಸಿ ಬಂದಿದ್ದರು. ಅಜ್ಜಿ ಬಾಲಕನ ಬಾಯಿಯಲ್ಲಿದ್ದ ಹಾವನ್ನು ಹೊರ ತೆಗೆದು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನನ್ನು ಕೂಲಂಕುಷವಾಗಿ ಪರಿಶೀಲಿಸಿದ ವೈದ್ಯರು ಅಪಾಯವಿಲ್ಲ ಎನ್ನುವುದನ್ನು ತಿಳಿದು ಬಳಿಕ ಡಿಸ್‌ಚಾರ್ಜ್ ಮಾಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡ ಹಲವರು ಹಾವಿನ ಬಗ್ಗೆ ಎಚ್ಚರ ವಹಿಸಿ ಎಂದು ಹಲವರು ಕಿವಿ ಮಾತು ಹೇಳಿದ್ದಾರೆ.