ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ನೇಮಕ..!
ಧಾನಸಭೆ ಚುನಾವಣೆ ನಡೆದು ಬರೋಬ್ಬರಿ ಆರು ತಿಂಗಳಿಗೂ ಹೆಚ್ಚು ಸಮಯ ಕಳೆದ ನಂತರ ಪ್ರತಿಪಕ್ಷ ಬಿಜೆಪಿ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಮಾಡಿದೆ. ಒಕ್ಕಲಿಗ ಸಮುದಾಯದ ನಾಯಕ, ಮಾಜಿ ಉಪ ಮುಖ್ಯಮಂತ್ರಿ, ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್ ಅಶೋಕ ಅವರಿಗೆ ಪ್ರತಿಪಕ್ಷ ನಾಯಕನ ಜವಾಬ್ದಾರಿ ವಹಿಸಲಾಗಿದೆ. ಬೆಂಗಳೂರಿನ ಐಟಿಸಿ ಹೋಟೆಲ್ನಲ್ಲಿ ಶುಕ್ರವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ವಾರವಷ್ಟೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿತ್ತು.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರಿನ ಐಟಿಸಿ ಹೋಟೆಲ್ನಲ್ಲಿ ನಡೆದ ಬಿಎಲ್ಪಿ ಸಭೆಯಲ್ಲಿ ಹೈಕಮಾಂಡ್ ವೀಕ್ಷಕರಾದ ನಿರ್ಮಲಾ, ದುಷ್ಯಂತ್ ಕುಮಾರ್ ಉಪಸ್ಥಿತರಿದ್ದರು. ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಾಜ್ಯ ಬಿಜೆಪಿ ಘಟಕದ ಸಂಘಟನಾ ಕಾರ್ಯದರ್ಶಿ ರಾಜೇಶ್ ಮತ್ತಿತರರು ಭಾಗವಹಿಸಿದ್ದರು.
ಶಾಸಕರನ್ನು ಉದ್ದೇಶಿಸಿ ಭಾಷಣದ ವೇಳೆ ವಿಪಕ್ಷ ನಾಯಕರ ವಿಚಾರವಾಗಿ ಹೈಕಮಾಂಡ್ ಸೂಚನೆಯನ್ನು ಸೂಚ್ಯವಾಗಿ ದುಶ್ಯಂತ್ ಕುಮಾರ್ ಗೌತಮ್ ಮತ್ತು ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿಸಿದರು. ಅಶೋಕ್ ಹೆಸರು ಘೋಷಣೆಗೆ ಮಾಜಿ ಸಿಎ ಬಸವರಾಜ ಬೊಮ್ಮಾಯಿ ಸೂಚಿಸಿದರೆ, ಮಾಜಿ ಸಚಿವ ಸುನೀಲ್ ಕುಮಾರ್ ಅನುಮೋದನೆ ಮಾಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಸ್ಫೋಟ
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಹೈಕಮಾಂಡ್ ವೀಕ್ಷಕರು ಪ್ರಮುಖರ ಜೊತೆ ಸಭೆ ನಡೆಸಿದ್ದರು. ವರಿಷ್ಠರ ನಿರ್ಧಾರ ಬಗ್ಗೆ ಆಕಾಂಕ್ಷಿಗಳ ಗಮನಕ್ಕೆ ತಂದಿದ್ದರು. ಇದೇ ವೇಳೆ ಆರ್ ಅಶೋಕ್ ನೇಮಕ ಕುರಿತು ತಿಳಿಸಿದಾಗ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹೈಕಮಾಂಡ್ ತೀರ್ಮಾನ ಒಪ್ಪದೆ ಸಭೆಯಿಂದ ತೆರಳಿದ್ದಾರೆ. ಬಿಎಲ್ಪಿ ಸಭೆ ಸಭೆಗೂ ಮುನ್ನವೇ ಹೊರನಡೆದಿದ್ದಾರೆ.
ಯಾರಿಗೂ ಬೇಸರವಾಗಿಲ್ಲ, ಸಭೆ ಬಹಿಷ್ಕರಿಸಿಲ್ಲವೆಂದ ಬೆಲ್ಲದ
ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟಗೊಂಡ ಬಗ್ಗೆ ಪ್ರತಿಕ್ರಿಯಸಿದ ಅರವಿದ ಬೆಲ್ಲದ, ಯಾರಿಗೂ ಬೇಸರ ಆಗಿಲ್ಲ, ಬಿಎಲ್ಪಿ ಸಭೆ ಬಹಿಷ್ಕರಿಸಿಲ್ಲವೆಂದಿದ್ದಾರೆ, ವೀಕ್ಷಕರು ಒನ್ ಟು ಒನ್ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಗದ ಶಾಸಕರೇ ಹೆಚ್ಚು ಇದ್ದಾರೆ ಎಂದು ಅವರು ಹೇಳಿದ್ದಾರೆ.
ಉಳಿದಂತೆ, ಶಾಸಕಾಂಗ ಪಕ್ಷದ ಸಭೆಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ ಎಸ್ಟಿ ಸೋಮಶೇಖರ್ ಗೈರಾಗಿದ್ದಾರೆ.