ಇಸ್ರೇಲ್-ಹಮಾಸ್ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್ ನಟಿ ನುಶ್ರತ್ ಭರುಚ್ಚ
![ಇಸ್ರೇಲ್-ಹಮಾಸ್ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್ ನಟಿ ನುಶ್ರತ್ ಭರುಚ್ಚ](https://urtv24.com/wp-content/uploads/2023/10/294767342_610266090456062_1496463771293068520_n-2.jpg)
ಜೆರುಸಲೇಂ: ಪ್ರಸ್ತುತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ಗುಂಪಿನ ನಡುವೆ ಉಂಟಾಗಿರುವ ಸಂಘರ್ಷದ ನಡುವೆ ಬಾಲಿವುಡ್ ನಟಿ ನುಶ್ರತ್ ಭರುಚ್ಚ ಇಸ್ರೇಲ್ನಲ್ಲಿ ಸಿಲುಕಿರುವುದಾಗಿ ಅವರ ತಂಡದ ಸದಸ್ಯರೊಬ್ಬರು ಶನಿವಾನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
![ಇಸ್ರೇಲ್-ಹಮಾಸ್ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್ ನಟಿ ನುಶ್ರತ್ ಭರುಚ್ಚ](https://urtv24.com/wp-content/uploads/2023/10/357087144_840926760731958_7213113000056513099_n-823x1024.jpg)
ನುಶ್ರತ್ ಅವರು ದುರಾದೃಷ್ಟವಶಾತ್ ಸಂಘರ್ಷ ಪೀಡಿತ ಇಸ್ರೇಲ್ನಲ್ಲಿ ಸಿಲುಕಿದ್ದಾರೆ. ಹೈಫಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಸ್ರೇಲ್ಗೆ ಹಾರಿದ್ದರು. ಶನಿವಾರ ಮಧ್ಯಾಹ್ನ 12.30ಕ್ಕೆ ಕೊನೆಯ ಬಾರಿಗೆ ಆಕೆಯೊಂದಿಗೆ ಸಂಪರ್ಕ ಸಾಧಿಸಿದ್ದೆ. ಬೇಸ್ಮೆಂಟ್ ಒಂದರಲ್ಲಿ ಸುರಕ್ಷಿತವಾಗಿ ಇರುವುದಾಗಿ ತಿಳಿಸಿದರು. ಇದಾದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದೇವೆ ಮತ್ತು ಯಾವುದೇ ಹಾನಿಯಾಗದೇ, ಆರೋಗ್ಯಯುತವಾಗಿಯೇ ಆಕೆ ತವರಿಗೆ ಮರಳುತ್ತಾಳೆ ಎಂದು ಭರವಸೆ ಇದೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
![ಇಸ್ರೇಲ್-ಹಮಾಸ್ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್ ನಟಿ ನುಶ್ರತ್ ಭರುಚ್ಚ](https://urtv24.com/wp-content/uploads/2023/10/321661911_1211905013079526_8977548106094035969_n-683x1024.jpg)
ನುಶ್ರತ್ ಭರುಚ್ಚ ಪರಿಚಯ
ನುಶ್ರತ್ ಭರುಚ್ಚ ಅವರು ಬಾಲಿವುಡ್ ನಟಿ. ಆರಂಭದಲ್ಲಿ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದ ನುಶ್ರುತ್, ತಮ್ಮ ನಟನೆ ಮತ್ತು ಮಾದಕ ನೋಟದಿಂದಲೇ ಎಲ್ಲ ಗಮನ ಸೆಳೆದರು. ಜೈ ಸಂತೋಷಿ ಮಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಲವ್ ಸೆಕ್ಸ್ ಔರ್ ಧೋಖಾ ಮತ್ತು ಪ್ಯಾರ್ ಕಾ ಪಂಚ್ನಾಮಾ ಯಶಸ್ವಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿನ ಮಹಿಳಾ ಪೋಷಕ ಪಾತ್ರಕ್ಕಾಗಿ ಜೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ.
![ಇಸ್ರೇಲ್-ಹಮಾಸ್ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್ ನಟಿ ನುಶ್ರತ್ ಭರುಚ್ಚ](https://urtv24.com/wp-content/uploads/2023/10/315176956_700986081392694_6397283704772044072_n-881x1024.jpg)
ಮುಂದುವರಿದ ಯುದ್ಧ
ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವ ಇಸ್ರೇಲ್ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸಿದೆ. 5 ಸಾವಿರಕ್ಕೂ ಹೆಚ್ಚು ರಾಕೆಟ್ಗಳ ಮೂಲಕ ಬೆಂಕಿಯ ಮಳೆಯನ್ನೇ ಸುರಿಸಿದೆ. ಇದರ ಜತೆಗೆ ಹಮಾಸ್ ಉಗ್ರರು ಇಸ್ರೇಲ್ನ ಹಲವಾರು ಗಡಿ ಪ್ರದೇಶಗಳಲ್ಲಿ ನುಸುಳಿದ್ದು, ಹಿಂಸಾಚಾರ ಸೃಷ್ಟಿಸಿದ್ದಾರೆ. ಇಸ್ರೇಲ್ನ ರಾಷ್ಟ್ರೀಯ ರಕ್ಷಣಾ ಸೇವೆ ಪ್ರಕಾರ ಕನಿಷ್ಠ 300 ಜನರು ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ನಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇವೆಯು ಆಪರೇಷನ್ ಐರನ್ ಸ್ಫೋರ್ಡ್ ಹೆಸರಿನಲ್ಲಿ ಹಮಾಸ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ. ಹಮಾಸ್ ನೆಲೆ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ಪ್ರತಿದಾಳಿಗೆ 200ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎನ್ನಲಾಗಿದೆ.
![ಇಸ್ರೇಲ್-ಹಮಾಸ್ ಸಂಘರ್ಷ: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿದ ಬಾಲಿವುಡ್ ನಟಿ ನುಶ್ರತ್ ಭರುಚ್ಚ](https://urtv24.com/wp-content/uploads/2023/10/276298295_541721710652466_3247006460658684854_n-683x1024.jpg)
ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು?
ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ.