ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ; ಜೆಡಿಎಸ್ ನವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರೋದು: ಪ್ರೀತಂ ಗೌಡ
ಹಾಸನ: ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್ ನವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರೋದು. ಮೈತ್ರಿ ಬಗ್ಗೆ ನಮ್ಮ ನಾಯಕರು ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಹಿರಿಯರ ತೀರ್ಮಾನವನ್ನು ಕಾರ್ಯಕರ್ತನಾಗಿ ಒಪ್ಪಿಕೊಳ್ಳುತ್ತೇನೆ. ಜೆಡಿಎಸ್ ನವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಾಕೆಂದರೆ ನಮ್ಮದು ರಾಷ್ಟ್ರೀಯ ಪಕ್ಷ , 303 ಸೀಟ್ ತೆಗೆದುಕೊಂಡಿದ್ದೇವೆ. ಒಂದು ಸೀಟ್ ನವರು ಬಂದು, 303 ಸೀಟ್ ನವರ ಜೊತೆ ಬಂದಿದ್ದಾರೆ ಎಂದು ಮಾಜಿ ಶಾಸಕ ಪ್ರೀತಂ ಗೌಡ (Preetham Gowda) ಮೈತ್ರಿ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರೀತಂ ಗೌಡ ಅವರು, ಬಂದಿರುವಂತಹ ನೆಂಟರು ಮೂಲ ಮನೆಯವರ ಜೊತೆ ಹಿಂದಾಣಿಕೆ ಆಗಿದ್ದಾರೆ. ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಜೆಡಿಎಸ್ ನವರು ನೆಂಟರು ಎಂದು ಬಣ್ಣಿಸಿದ್ದಾರೆ.
ಬೇಡ ಅಂತೇಳೋದಕ್ಕೆ ನಾನು ಯಾರು?
ಜೆಡಿಎಸ್ ನವರು ನಮ್ಮ ಸಂಬಂಧ ಬೆಳಿಸಿದ ಮೇಲೆ ನಮ್ಮ ಬಗ್ಗೆ ತಿಳಿದುಕೊಂಡಿರುತ್ತಾರೆ. ಬಿಜೆಪಿಯ ಸಂಸ್ಕಾರ ಏನು ಎಂದರೆ, ನಮ್ಮದು ರಾಷ್ಟ್ರೀಯತೆ, ದೇಶ ಮೊದಲು ವ್ಯಕ್ತಿ ಕೊನೆ ಅನ್ನೋ ಅಜೆಂಡಾ. ಈ ಎಲ್ಲವನ್ನೂ ಒಪ್ಕೊಂಡು ಬಂದಿರೋದರಿಂದ ಬೇಡ ಅಂತೇಳೋದಕ್ಕೆ ನಾನು ಯಾರು? ನಮ್ಮಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ಇರೋದಿಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರೋದಿಲ್ಲ. ಈ ಎಲ್ಲಾ ಅಂಶಗಳನ್ನ ಅವರು ಮನದಟ್ಟು ಮಾಡ್ಕೊಂಡು, ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದರಿಂದ ಬಹಳ ಸ್ವಾಗತ ಮಾಡೋ ವಿಚಾರ ಎಂದು ಹೇಳಿದರು.
ಆರ್‌ಪಿಐ ಹೆಸರು ಪ್ರಸ್ತಾಪಿಸಿದ ಪ್ರೀತಂ
ಹಾಸನ ಬಿಜೆಪಿ ಪಾಲಾಗುತ್ತೋ, ಆರ್ ಪಿ ಐ ಪಾಲಾಗುತ್ತೋ, ಜೆಡಿಎಸ್ ಪಾಲಾಗುತ್ತೋ ನೋಡೋಣಾ. ಎನ್ ಡಿ ಎ ಮೈತ್ರಿಕೂಟ ಪಕ್ಷಗಳು ಬಹಳಷ್ಟಿದೆ. ರಾಷ್ಟ್ರೀಯ ನಾಯಕರು ಹಾಸನ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡ್ತಾರೆ. ಆರ್‌ಪಿಐ, ಬಿಜೆಪಿ, ಜೆಡಿಎಸ್ ಯಾರು ಅಭ್ಯರ್ಥಿ ಆಗ್ತಾರೋ ನೋಡೋಣಾ ಎಂದು ಹೇಳುವ ಮೂಲಕ ಆರ್‌ಪಿಐ ಹೆಸರು ಪ್ರಸ್ತಾಪಿಸಿ ಜೆಡಿಎಸ್‌ಗೆ ಟಿಕೆಟ್ ನೀಡುವುದರ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ
ಬೇರೆ ಮನೆ ಹೊಸದಾಗಿ ಕಟ್ಟೋ ಅವಶ್ಯಕತೆ ಏನಿದೆ?
ಇದೇ ವೇಳೆ ಕಾಂಗ್ರೆಸ್ ನಾಯಕರು ಪ್ರೀತಂ ಗೌಡಗೆ ಗಾಳ ಹಾಕಿದ್ದಾರಾ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಪ್ರೀತಂ ಗೌಡ ರಾಜಕಾರಣಕ್ಕೆ ಬಂದಿರೋದು ತತ್ವ ಸಿದ್ಧಾಂತದ ಆಧಾರದ ಮೇಲೆ, ಚುನಾವಣೆ ಮಾಡಬೇಕು ಅಂತಾ ಬಂದಾಗ ಹಾಸನದಲ್ಲಿ ಬಿಜೆಪಿ 6100 ವೋಟು. ಈಗ 78 ಸಾವಿರಕ್ಕೆ ಹೋಗಿದೆ.
ಕಾರ್ಯಕರ್ತರ ತಂಡ ಇದೆ, ಇದನ್ನ ಬಿಟ್ಟು ನಾಲ್ಕು ಸಾವಿರ ಇರೋ ಪಕ್ಷಕ್ಕೆ ಯಾರಾದರೂ ಹೋಗ್ತಾರಾ? ಬೇರೆ ಮನೆ ಹೊಸದಾಗಿ ಕಟ್ಟೋ ಅವಶ್ಯಕತೆ ಏನಿದೆ? ಎಂದಿದ್ದಾರೆ. ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯೇ ಕ್ಯಾಂಡಿಡೇಟ್ ಆಗ್ತಾರೆ, ಜೆಡಿಎಸ್ ಅಲೆಯನ್ಸ್ ಆಗಿರುವುದರಿಂದ ಬಿಜೆಪಿಗೆ ಸಹಾಯ ಮಾಡೋ ಅನಿವಾರ್ಯತೆ ಇರುತ್ತೆ. ಅವರು ಹೇಳಿದ್ದಾರೆ ಲಾಂಗ್ ಟರ್ಮ್ ರಿಲೆಶನ್ ಅಂತಾ ಎಂದು ಹೇಳಿದರು.