ಪುತ್ತೂರು : ಕೊಲೆಯಾದ ಗೌರಿ ಮನೆಗೆ ಕೇಂದ್ರ ಸಚಿವ ಭಗವಂತ್ ಖೂಬಾರೊಂದಿಗೆ ನಳಿನ್ ಕುಮಾರ್ ಕಟೀಲ್ ಭೇಟಿ!
ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಗುರುವಾರ ಯುವಕನ ಚೂರಿ ಇರಿತಕ್ಕೆ ಬಲಿಯಾದ ಯವತಿ ಗೌರಿಯ ಅಳಿಕೆ ಗ್ರಾಮದ ಕುದ್ದುಪದವು ಆದಾಳ ಮನೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಭಗವಂತ್ ಖೂಬಾ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ಮುಖಂಡರೊಂದಿಗೆ ಶುಕ್ರವಾರ ಭೇಟಿ ನೀಡಿದರು.
ಗೌರಿ ತಾಯಿಯನ್ನು ಕಂಡು ಸಾಂತ್ವಾನ ಹೇಳಿದ ಗಣ್ಯರು ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದರು.
ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಜಿಲ್ಲಾ ಕಾರ್ಯದರ್ಶಿ ರಂದೀಪ್ ಕಾಂಚನ್ ಮತ್ತಿತರ ಮುಖಂಡರುಗಳು ಈ ಸಂದರ್ಭ ಉಪಸ್ಥಿತರಿದ್ದರು.
ಉಳ್ಳಾಲ: ಒಂಟಿ ವೃದ್ದೆ ಸರ ಕಳವು-ಅಪರಿಚಿತ ಮಹಿಳೆಗಾಗಿ ಶೋಧ ಕಾರ್ಯ:
ಅಪರಿಚಿತ ಮಹಿಳೆಯೋರ್ವಳು ಮನೆಗೆ ನುಗ್ಗಿ ಒಂಟಿಯಾಗಿದ್ದ ವೃದ್ಧೆ ಮುಖಕ್ಕೆ ದಿಂಬಿನಿಂದ ಅದುಮಿ 22 ಗ್ರಾಮ್ ಚಿನ್ನದ ಸರ ದರೋಡೆಗೈದು ಪರಾರಿಯಾಗಿರುವ ಘಟನೆ ಕುಂಪಲ ಮೂರುಕಟ್ಟೆ ಒಂದನೇ ಅಡ್ಡ ರಸ್ತೆಯ ಮಿತ್ರನಗರ ಎಂಬಲ್ಲಿ ನಡೆದಿದೆ.
ಮಿತ್ರನಗರದ ಒಂಟಿ ಮನೆ ನಿವಾಸಿ ಸುಶೀಲ(76)ಎಂಬವರ ಕತ್ತಲ್ಲಿದ್ದ 22 ಗ್ರಾಮ್ ತೂಕದ ಹವಳ ಪೋಣಿತ ಚಿನ್ನದ ಸರ ದರೋಡೆ ನಡೆಸಲಾಗಿದೆ. ಸುಶೀಲ ಅವರ ಪತಿ ಉಗ್ಗಪ್ಪ ಮೂಲ್ಯ ಅವರು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ದಂಪತಿಗೆ ಮಕ್ಕಳಿರಲಿಲ್ಲ ಹಾಗಾಗಿ ಸುಶೀಲ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು.
ಇಂದು ಮದ್ಯಾಹ್ನ 2.45 ರ ವೇಳೆ ಸುಶೀಲ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದ ಸಂದರ್ಭ ಮಹಿಳೆಯೊಬ್ಬಳು ಮನೆಯೊಳಗೆ ನುಗ್ಗಿ ಮುಖಕ್ಕೆ ದಿಂಬನ್ನು ಅದುಮಿ ಸರವನ್ನು ದರೋಡೆಗೈದು ಪರಾರಿಯಾಗಿದ್ದಾಳೆ. ದರೋಡೆಗೈದ ಆಗಂತುಕೆ ಬಾಗಿಲಿನಿಂದ ಹೊರ ಓಡಿದಾಗ ಸುಶೀಲ ಅವರು ಮಹಿಳೆ ಚೂಡಿದಾರ್ ಧರಿಸಿರುವುದನ್ನು ಗಮನಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್, ಉಪ ನಿರೀಕ್ಷಕರಾದ ಶೀತಲ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಿಜೆಪಿ ಮುಖಂಡ ಸತೀಶ್ ಕುಂಪಲ ಅವರು ಪೊಲೀಸರಲ್ಲಿ ಆರೋಪಿಯ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ. ಈ ಹಿಂದೆನೂ ಸುಶೀಲ ಅವರ ಎರಡು ಚಿನ್ನದ ಬಳೆಗಳು ಕಳವಾಗಿದ್ದು ಪೊಲೀಸ್ ದೂರು ನೀಡಿರಲಿಲ್ಲ.