Mulki : ಮೂಲ್ಕಿ ಮೂಲದ ಅಮೆರಿಕನ್ ಮೆಥೋಡಿಸ್ಟ್ ಬಿಷಪ್ ಸುದರ್ಶನ್ ನಿಧನ
ಮೂಲ್ಕಿ: (Mulki)ಮೊದಲ ಭಾರತೀಯ ಅಮೆರಿಕನ್ ಮೆಥೋಡಿಸ್ಟ್ ಬಿಷಪ್(Methodist Bishop), ಮೂಲತಃ ಮೂಲ್ಕಿಯವರಾದ (Sudarshan Devdhar)ಸುದರ್ಶನ್ ದೇವಧರ್ (72) ಅವರು ಜು. 19ರಂದು ಅಮೆರಿಕದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. 2004ರಲ್ಲಿ ಈಶಾನ್ಯ ಪ್ರಾಂತೀಯ ಪರಿಷತ್ತಿನ ಬಿಷಪ್ ಹುದ್ದೆಗೆ ಆಯ್ಕೆಯಾಗಿ ಅಮೆರಿಕದ ಯುನೈಟೆಡ್ ಮೆಥೋಡಿಸ್ಟ್ ಚರ್ಚ್ನ ಬಿಷಪ್ ಆಗಿದ್ದ ಮೊಟ್ಟಮೊದಲ ಭಾರತೀಯ ಅಮೆರಿಕನ್ ಆಗಿದ್ದು, 2023ರ ಜ. 1ರಂದು ನಿವೃತ್ತರಾಗಿದ್ದರು.
ಬಿಷಪ್ ದೇವಧರ್ ಅವರು ಬೋಸ್ಟನ್ ಪ್ರದೇಶದ ರೆಸಿಡೆಂಟ್ ಬಿಷಪ್ ಆಗಿದ್ದರು. 1982ರಲ್ಲಿ ಸಭಾಪಾಲಕರಾಗಿ ಸೇವೆ ಆರಂಭಿಸಿ 8 ವರ್ಷಗಳ ಕಾಲ ಓಂಟಾರಿಯೊ ಜಿಲ್ಲೆ ಮತ್ತು ನ್ಯೂಯಾರ್ಕ್ನ ಉತ್ತರಕೇಂದ್ರ ಜಿಲ್ಲೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ್ದರು.
ಬಿಷಪರಾಗಿ ಅವರು ನ್ಯೂಜೆರ್ಸಿ ಎಪಿಸ್ಕೋಪಲ್ ಪ್ರದೇಶದ ಜವಾಬ್ದಾರಿಯನ್ನು 8 ವರ್ಷಗಳ ಕಾಲ ಯಶಸ್ವಿಯಾಗಿ ನಿರ್ವಹಿಸಿದ ಅನಂತರ 2012ರಲ್ಲಿ ಬೋಸ್ಟನ್ ಪ್ರಾಂತದ ಜವಾಬ್ದಾರಿಯನ್ನು ಹೊಂದಿದರು. 1951ರ ಎ. 1ರಂದು ಜನಿಸಿದ್ದ ಅವರು ಡೀಕನ್ರಾಗಿ ದಕ್ಷಿಣಭಾರತ ಐಕ್ಯಸಭೆಯ ದೀಕ್ಷೆ ಪಡೆದು ಮೊತ್ತಮೊದಲು ಕೊಡಗಿನ ಮಡಿಕೇರಿಯಲ್ಲಿ ಸೇವೆಸಲ್ಲಿಸಿದರು.
ಸಭಾಪಾಲಕರ ಕುಟುಂಬದಲ್ಲಿ ಜನಿಸಿದ ಅವರು ಮೂಲ್ಕಿಯ ವಿಜಯ ಕಾಲೇಜಿನಿಂದ ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಬಿ.ಕಾಂ. ಪದವಿ ಗಳಿಸಿ ಅನಂತರ ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಿಂದ ಬ್ಯಾಚುಲರ್ ಆಫ್ ಡಿವಿನಿಟಿ ಪದವಿಯನ್ನು ಪಡೆದರು. ಎಂ.ಟೆಕ್ ಪದವಿಯನ್ನು ಪರ್ಕಿನ್ಸ್ ಸ್ಕೂಲ್ ಆಫ್ ಥಿಯಾಲಜಿಯಿಂದ ದಕ್ಷಿಣ ಮೆಥೋಡಿಸ್ಟ್ ವಿಶ್ವವಿದ್ಯಾಲಯದಡಿಯಲ್ಲಿ, ಎಂ.ಫಿಲ್. ಮತ್ತು ಪಿಎಚ್.ಡಿ.ಯನ್ನು ಡ್ರೂ ಯುನಿವರ್ಸಿಟಿ ನ್ಯೂ ಜೆರ್ಸಿಯಿಂದ ಪಡೆದಿದ್ದರು.