16ನೇ ಐಪಿಎಲ್‌ಗೆ ಕ್ಷಣಗಣನೆ; ಅಭಿಮಾನಿಗಳಲ್ಲಿ ಜೋರಾಯ್ತು ಐಪಿಎಲ್ ಜ್ವರ
ಅಹಮದಾಬಾದ್(ಮಾ.30): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಹತ್ತೂ ತಂಡಗಳು ಟೂರ್ನಿಗೆ ಸಜ್ಜುಗೊಳ್ಳುತ್ತಿವೆ. ಮಾ.31ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್‌್ಸ ನಡುವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ.
ಈಗಾಗಲೇ ಬಹುತೇಕ ಎಲ್ಲಾ ಭಾರತೀಯ ಆಟಗಾರರು ತಮ್ಮ ತಮ್ಮ ತಂಡಗಳನ್ನು ಕೂಡಿಕೊಂಡಿದ್ದು, ವಿದೇಶಿ ಆಟಗಾರರು ಕೂಡಾ ಭಾರತಕ್ಕೆ ಆಗಮಿಸುತ್ತಿದ್ದಾರೆ. ಆರ್ಸಿಬಿಯ ಬಹುತೇಕ ಎಲ್ಲಾ ಆಟಗಾರರು ಬೆಂಗಳೂರಿಗೆ ಆಗಮಿಸಿ ತಂಡ ಸೇರಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಐಪಿಎಲ್ನ ಅತಿ ದುಬಾರಿ ಆಟಗಾರ ಸ್ಯಾಮ್ ಕರ್ರನ್, ಚೆನ್ನೈ ತಂಡದ ಬೆನ್ ಸ್ಟೋಕ್ಸ್, ಮುಂಬೈನ ಕ್ಯಾಮರೂನ್ ಗ್ರೀನ್, ಆರ್ಸಿಬಿಯ ಗ್ಲೆನ್ ಮ್ಯಾಕ್ಸ್ವೆಲ್, ಗುಜರಾತ್ ಜೈಂಟ್ಸ್‌ನ ಕೇನ್ ವಿಲಿಯಮ್ಸನ್, ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಸೇರಿದಂತೆ ಪ್ರಮುಖರು ತಮ್ಮ ತಮ್ಮ ತಂಡಗಳನ್ನು ಸೇರ್ಪಡೆಗೊಂಡಿದ್ದಾರೆ. ರೋಹಿತ್ ಶರ್ಮಾ ಮುಂಬೈ ತಂಡದ ಜೊತೆಗಿದ್ದು, ಇನ್ನಷ್ಟೇ ಅಭ್ಯಾಸ ಆರಂಭಿಸಲಿದ್ದಾರೆ. ಗುಜರಾತ್ ಪ್ರಮುಖ ಬ್ಯಾಟರ್ ಡೇವಿಡ್ ಮಿಲ್ಲರ್, ಲಖನೌ ತಂಡದ ಕ್ವಿಂಟನ್ ಡಿಕಾಕ್, ಪಂಜಾಬ್ನ ಕಾಗಿಸೊ ರಬಾಡ, ಡೆಲ್ಲಿಯ ಏನ್ರಿಚ್ ನೋಕಿಯಾ, ಲುಂಗಿ ಎನ್ಗಿಡಿ, ಹೈದರಾಬಾದ್ ನಾಯಕ ಏಡನ್ ಮಾರ್ಕ್ರಮ್ ಸೇರಿದಂತೆ ಪ್ರಮುಖ ಆಟಗಾರರು ಇನ್ನಷ್ಟೇ ಭಾರತಕ್ಕೆ ಆಗಮಿಸಲಿದ್ದು, ಐಪಿಎಲ್ನ ಮೊದಲ ಮತ್ತು ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಶ್ರೀಲಂಕಾದ ಆಟಗಾರರೂ ಕೂಡಾ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಭ್ಯಾಸಕ್ಕೇ ಕ್ರೀಡಾಂಗಣ ಭರ್ತಿ!
ಆರ್ಸಿಬಿ ಹಾಗೂ ಚೆನ್ನೈ ತಂಡಗಳು ಈಗಾಗಲೇ ತಮ್ಮ ತವರಿನ ಕ್ರೀಡಾಂಗಣಗಳಲ್ಲಿ ಅಭ್ಯಾಸ ನಡೆಸುತ್ತಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳನ್ನು ಮನರಂಜಿಸಿದೆ. ಆರ್ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಅನ್ಬಾಕ್ಸ್’ ಕಾರ್ಯಕ್ರಮದ ಜೊತೆಗೆ ಅಭ್ಯಾಸ ನಡೆಸಿದ್ದು, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಅಪಾರ ಪ್ರಮಾಣದ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇನ್ನು ಚೆನ್ನೈನ ಚಿಪಾಕ್ ಕ್ರೀಡಾಂಗಣವೂ ಅಭ್ಯಾಸ ಶಿಬಿರಕ್ಕೇ ಬಹುತೇಕ ಭರ್ತಿಯಾಗಿದ್ದು, ಎಂ.ಎಸ್.ಧೋನಿ ಸೇರಿದಂತೆ ಪ್ರಮುಖ ಆಟಗಾರರ ಅಭ್ಯಾಸವನ್ನು ಅಭಿಮಾನಿಗಳು ನೇರವಾಗಿ ವೀಕ್ಷಿಸಿದರು.
ಕೆಲ ಪಂದ್ಯದಲ್ಲಿ ಬೌಲ್ ಮಾಡಲ್ಲ ಬೆನ್ ಸ್ಟೋಕ್ಸ್
ಚೆನ್ನೈ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿ ಐಪಿಎಲ್ನ ಆರಂಭಿಕ ಕೆಲ ಪಂದ್ಯಗಳಲ್ಲಿ ಬೌಲ್ ಮಾಡಲ್ಲ ಎಂದು ತಿಳಿದುಬಂದಿದೆ. ಅವರು ಎಡಗಾಲಿನ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಕೆಲ ಪಂದ್ಯಗಳಲ್ಲಿ ಬೌಲ್ ಮಾಡದೆ ತಜ್ಞ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ.
ಐಪಿಎಲ್: ಮೊದಲಾರ್ಧಕ್ಕೆ ರಜತ್ ಪಾಟೀದಾರ್ ಅಲಭ್ಯ?
ನವದೆಹಲಿ: 16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಆರ್‌ಸಿಬಿಗೆ ಗಾಯಾಳುಗಳ ಸಮಸ್ಯೆ ಹೆಚ್ಚುತ್ತಿದೆ. ಅಗ್ರ ಕ್ರಮಾಂಕದ ಬ್ಯಾಟರ್ ರಜತ್ ಪಾಟೀದಾರ್ ಹಿಮ್ಮಡಿ ಗಾಯದಿಂದ ಸಂಪೂರ್ಣ ಚೇತರಿಕೆ ಕಾಣದ ಕಾರಣ ಟೂರ್ನಿಯ ಮೊದಲಾರ್ಧಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಇದೇ ವೇಳೆ ಆಸ್ಪ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಸಹ ಕಾಲಿನ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಪಂದ್ಯಾವಳಿಯಲ್ಲಿ ಆಡುವುದು ಅನುಮಾನವೆನಿಸಿದೆ.