ನಾಗ್ಪುರ ಟೆಸ್ಟ್: ಕೇವಲ 91 ರನ್‌ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ; ಭಾರತಕ್ಕೆ ಇನ್ನಿಂಗ್ಸ್ ಹಾಗೂ 132 ರನ್ ಅಂತರದ ಭರ್ಜರಿ ಗೆಲುವು
ನಾಗ್ಪುರ: ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ನಾಗ್ಪುರ ಟೆಸ್ಟ್ ಪಂದ್ಯವು ಮೂರೇ ದಿನಕ್ಕೆ ಅಂತ್ಯವಾಗಿದ್ದು, ರೋಹಿತ್ ಶರ್ಮಾ ಬಳಗವು ಇನ್ನಿಂಗ್ಸ್ ಮತ್ತು 132 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.
233 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡವು 91 ರನ್ ಗೆ ಸರ್ವಪತನಗೊಂಡಿತು. ಈ ಜಯದೊಂದಿಗೆ ಭಾರತವು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತು.
ಎರಡನೇ ದಿನದಾಟದ ಅಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದ್ದಲ್ಲಿಂದ ಆಟ ಮುಂದುವರಿಸಿದ ಭಾರತ ತಂಡವು ಭರ್ತಿ 400 ರನ್ ಗಳಿಸಿತು. ಜಡೇಜಾ 70 ರನ್ ಗಳಿಸಿ ಔಟಾದರೆ, ದಿಟ್ಟ ಹೋರಾಟ ಮುಂದುವರಿಸಿದ ಅಕ್ಷರ್ ಪಟೇಲ್ 84 ರನ್ ಮಾಡಿದರು. ಅದರಲ್ಲೂ ಶಮಿ ಜೊತೆ 52 ರನ್ ಜೊತೆಯಾಟವಾಡಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಶಮಿ ಮೂರು ಸಿಕ್ಸರ್ ಜೊತೆಗೆ 37 ರನ್ ಮಾಡಿದರು. ಆಸೀಸ್ ಪರ ಪದಾರ್ಪಣೆ ಮಾಡಿದ ಆಟಗಾರ ಮರ್ಫಿ ಏಳು ವಿಕೆಟ್ ಪಡೆದು ಮಿಂಚಿದರು.
233 ರನ್ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಗೆ ಭಾರತೀಯ ಸ್ಪಿನ್ನರ್ ಗಳು ಕಾಡಿದರು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ದಾಳಿಗೆ ನಲುಗಿದ ಕಾಂಗರೂ ನಾಡಿನ ಬ್ಯಾಟರ್ ಗಳು ಸುಲಭದಲ್ಲಿ ವಿಕೆಟ್ ಚೆಲ್ಲಿದರು. ಒಂದಷ್ಟು ಪ್ರತಿರೋಧ ತೋರಿದ ಸ್ಮಿತ್ ಅಜೇಯ 25 ರನ್ ಮಾಡಿದರು. ಅಶ್ವಿನ್ ಐದು ವಿಕೆಟ್, ಜಡೇಜಾ ಮತ್ತು ಶಮಿ ತಲಾ ಎರಡು ವಿಕೆಟ್ ಕಿತ್ತರು.
ನಡೆದಾಡಲು ಆರಂಭಿಸಿದ ರಿಷಭ್ ಪಂತ್ ಸ್ಫೂರ್ತಿದಾಯಕ ಸಂದೇಶ!
ನವದೆಹಲಿ: ಕಾರು ಅಪಘಾತದಿಂದ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ನಡೆದಾಡಲು ಆರಂಭಿಸಿದ್ದಾರೆ.
ಟೀಮ್ ಇಂಡಿಯಾದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶುಕ್ರವಾರ (ಫೆ.10) ಎರಡು ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಚೇರಿಕೆಯೆಡೆಗೆ ಒಂದೊಂದೇ ಹೆಜ್ಜೆ ಇಡುತ್ತಿರುವುದಾಗಿ ಶುಭ ಸುದ್ದಿ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30ರಂದು ತಮ್ಮ ಹುಟ್ಟೂರು ಉತ್ತರಾಖಂಡ್‌ನ ರೂರ್ಕಿಗೆ ಕಾರ್‌ನಲ್ಲಿ ತೆರಳುತ್ತಿದ್ದಾದ ಸಂಭವಿಸಿದ ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಗಾಯಗೊಂಡಿದ್ದರು. ಈಗ ಚೇತರಿಕೆಯ ಹಾದಿಯಲ್ಲಿರುವ ಪಂತ್, ಪ್ರಗತಿ ಕಂಡಿರುವ ಸುಳಿವು ನೀಡಿದ್ದಾರೆ.
ಮಂಡಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಿರುವುದರಿಂದ ನಡೆಯಲು ಊರುಗೋಲು ಬಳಸಿ ಒಂದೋಂದೇ ಹೆಜ್ಜೆ ಇಡುತ್ತಿರುವುದಾಗಿ ಪಂತ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.’ಒಂದು ಹೆಜ್ಜೆ ಮುಂದಕ್ಕೆ, ಒಂದು ಹೆಜ್ಜೆ ದೃಢ, ಒಂದು ಹೆಜ್ಜೆ ಚೇತರಿಕೆಯತ್ತ’ ಎಂದು ಪಂತ್ ತಮ್ಮ ಅಭಿಮಾನಿಗಳಿಗಾಗಿ ಸಂದೇಶ ಹಂಚಿದ್ದಾರೆ
One step forward
— Rishabh Pant (@RishabhPant17) February 10, 2023
One step stronger
One step better pic.twitter.com/uMiIfd7ap5