ಬಾಗೇಪಲ್ಲಿಯಲ್ಲಿ ಯಾವುದೇ ಕಾರಣಕ್ಕೂ ಸಿಪಿಎಂ ಜತೆ ಹೊಂದಾಣಿಕೆ ಇಲ್ಲ: ಎಚ್ಡಿಕೆ

ಬಾಗೇಪಲ್ಲಿ (ಫೆ.3) : ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯಾವುದೇ ಕಾರಣಕ್ಕೂ ಸಿಪಿಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳವ ಪ್ರಶ್ನೆಯೇ ಇಲ್ಲ. ಈಗಾಗಲೇ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಗುರುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿ, ನಿಜ ನಾವು ಗೆದ್ದೆತ್ತಿನ ಬಾಲ ಹಿಡಿತಿವಿ, ಆದರೆ ಕಾಂಗ್ರೆಸ್ ಏಕೆ ಸೋಲೆತ್ತಿನ ಬಾಲ ಹಿಡಿಯೋದು ಎಂದು ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿತಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಅನಿತಾ ಕುಮಾರಸ್ವಾಮಿ ಸ್ಪರ್ಧೆ ಇಲ್ಲ
ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸಚಿವ ಡಾ.ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಈ ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಅನಿತಾ ಕುಮಾರ ಸ್ವಾಮಿ ಇಲ್ಲಿ ಸ್ಪರ್ಧಿಸಬೇಕು ಎಂದು ಹಲವರು ಒತ್ತಡ ಹೇರಿರುವುದು ನಿಜ ಆದರೆ ಇದನ್ನು ಆಗಲೇ ತಿರಸ್ಕರಿಸಲಾಗಿದೆ ಎಂದರು.
ದೇವೆಗೌಡರ ಕುಟುಂಬಕ್ಕೆ ಯಾರು ಚೂರಿ ಹಾಕಿದರು ಅಂತಹ ಕುಟುಂಬಗಳಿಗೆ ಜನರು ತಕ್ಕಪಾಠ ಕಲಿಸಿದ್ದಾರೆ. ದೇವೇಗೌರ ಕುಟುಂಬಕ್ಕೆ ಚೂರಿ ಹಾಕಿದಂತಹ ಸಂದರ್ಭದಲ್ಲಿ ಹಲವು ಘಟನೆಗಳು ರಾಜ್ಯದಲ್ಲಿ ನಡೆದು ಹೋಗಿವೆ. ದೇವೇಗೌಡರವರ ಜೊತೆ ಇದ್ದಾಗ ಹೇಗಿದ್ದರು ಬಿಟ್ಟು ಹೋದಾಗ ಏನಾಗಿದ್ದಾರೆ ಎಂಬುದು ಇತಿಹಾಸದಲ್ಲಿ ಸೇರಿದೆ. ಕೃಷ್ಣ ಬೈರೇಗೌಡ ರವರಿಗೆ ರಾಜಕೀಯ ಗೊತ್ತಿಲ್ಲ. ಕೋಲಾರಕ್ಕೆ ಅವರ ಕೊಡಗೆ ಏನು ಎಂದು ಪ್ರಶ್ನಿಸಿದರು.
ಟಿಕೆಟ್ ವಿಷಯದಲ್ಲಿ ಗೊಂದಲ ಇಲ್ಲ
ಪಕ್ಷದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ, ಹಾಸನ ಸೇರಿದಂತೆ ರಾಜ್ಯ ಎಲ್ಲಾ ಕ್ಷೇತ್ರಗಳಲ್ಲಿ ಬಗೆಹರಿಯಲಿದೆ, ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ 120 ಸ್ಥಾನಗಳ ಗೆಲುವಿಗೆ ಜನ ತೀರ್ಮಾನ ಮಾಡಿದ್ದಾರೆ ಎಂದರು. ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ಅಡಿಯೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಅಡಿಯೋನಾದರು ಬಿಡಲಿ, ಸಿಡಿಯಾದರೂ ಬಿಡಲಿ. ನಾನು ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದರು.